ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಹಾಂತ ಶ್ರೀಗಳ ಕೊಡುಗೆ ಅಪಾರ
ಕಲಬುರಗಿ:ಆ.1: ಮದ್ಯಪಾನ, ಧೂಮಪಾನ, ಗುಟಕಾ ಸೇವನೆಯಂತಹ ಮುಂತಾದ ಕೆಟ್ಟ ಚಟಗಳಿಗೆ ದಾಸರಾಗಿ, ಸ್ವಂತ ತಾವು ಹಾಳಾಗುವದರ ಜೊತೆಗೆ, ಸಮಾಜದ ಸ್ವಾಸ್ಥö್ಯವನ್ನು ಕೆಡಿಸುತ್ತಿದ್ದ ಅಸಂಖ್ಯಾತ ಯುವ ಜನತೆಯ ಚಟವನ್ನು ಬಿಡಿಸಿ, ಅವರ ಬಾಳನ್ನು ಸುಂದರವಾಗಿಸುವ ಜೊತೆಗೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಇಡೀ ತಮ್ಮ ಜೀವನದುದ್ಧಕ್ಕೂ ಶ್ರಮಿಸಿದ ಇಳಕಲ್‌ನ ಪೂಜ್ಯ ಡಾ.ಮಹಾಂತ ಶಿವಯೋಗಿಗಳು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಿದ್ದ ಇಳಕಲ್‌ನ ಪೂಜ್ಯ ಡಾ.ಮಹಾಂತ ಶಿವಯೋಗಿಗಳ ಜನ್ಮದಿನವಾದ ‘ವ್ಯಸನಮುಕ್ತ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಶ್ರೀಗಳು ಬಸವ ತತ್ವವನ್ನು ಎಲ್ಲೆಡೆ ಪ್ರಸರಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅತ್ಯಂತ ಸರಳ, ಸಜ್ಜನಿಕೆಯ ಮೂರ್ತಿಯಾಗಿದ್ದ ಅವರು, ಒಬ್ಬ ಆದರ್ಶ ಗುರುಗಳೆಂದರೆ ಹೇಗೆ ಇರಬೇಕೆಂದು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಅವರ ಜನ್ಮದಿನವನ್ನು ಕರ್ನಾಟಕ ಸರ್ಕಾರ ‘ವ್ಯಸನಮುಕ್ತ ದಿನಾಚರಣೆ’ಯೆಂದು ಘೋಷಿಸಿದೆ. ವ್ಯಸನಮುಕ್ತ ಎಂಬುದು ದಿನಾಚರಣೆಗೆ ಮಾತ್ರ ಸೀಮಿತವಾಗಬಾರದು. ಕೆಟ್ಟ ಚಟಗಳಿಂದ ದೂರವಿರುವುದು, ಅದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರ ಹಾಗೂ ವಿದ್ಯಾರ್ಥಿಗಳಿದ್ದರು.