ಮುಂದಿನ ಅಧಿಕಾರಿಗಳಿಗೆ ಮಾದರಿ ಆರ್.ಡಿ. ಚಂದ್ರಶೇಖರ್
ಕಲಬುರಗಿ:ಆ.1: ಕ್ರೋಧವನ್ನು ಹಿಡಿತದಲ್ಲಿ ಇಟ್ಟುಕೊಂಡರೆ ನಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರ್ಯ ನಿರ್ವಹಿಸಬಹುದು ಎಂಬುದಕ್ಕೆ ಆರ್.ಡಿ.ಚಂದ್ರಶೇಖರ ಅವರು ಉದಾಹರಣೆ ಎಂದು ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರವಿಂದ್ರ ಕರಲಿಂಗಣ್ಣವರ್ ಹೇಳಿದರು.
ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ, ಕಲಬುರಗಿ, ಕವಿಪ್ರನಿ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್‌ಗಳ ಒಕ್ಕೂಟ ಜೆಸ್ಕಾಂ ಕಲಬುರಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 36 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಜೆಸ್ಕಾಂನ ತಾಂತ್ರಿಕ ವಿಭಾಗದ ನಿರ್ದೇಶಕ ಆರ್.ಡಿ.ಚಂದ್ರಶೇಖರ್ ಅವರ ವಯೋ ನಿವೃತ್ತ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
36 ವರ್ಷಗಳಿಂದ ವಿದ್ಯುತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಳ-ಸಜ್ಜನ, ಅಜಾತಶತ್ರು ಹಾಗೂ ಮುಗ್ದ ವ್ಯಕ್ತಿ ಮತ್ತು ಸದಾ ಹಸನ್ಮುಖಿಯಾಗಿರುವಂತಹವರು ಆರ್.ಡಿ.ಚಂದ್ರಶೇಖರ ಅವರು. ಜೆಸ್ಕಾಂನ ಹಲವಾರು ಸಾಧನೆಗಳಲ್ಲಿ ಇವರ ಪಾತ್ರ ಮುಖ್ಯವಾಗಿದೆ. ಕೆಲಸದ ಜೊತೆ ಸಾಮಾಜಿಕ ಸೇವೆಗಳು, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕೆಂಬುದನ್ನು ತೋರಿಸಿಕೊಟ್ಟು ನಮಗೆ ಮತ್ತು ಮುಂದಿನ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. 2011 ರಲ್ಲಿ ಮುಖ್ಯ ಅಭಿಯಂತರರಾಗಿ ನೇಮಕವಾಗಿ 13 ವರ್ಷ ಕೆಲಸ ಮಾಡಿ ಈಗ ನಿವೃತ್ತಿ ಹೊಂದುತ್ತಿದ್ದಾರೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಇಲಾಖೆ ವತಿಯಿಂದ ಆರ್.ಡಿ.ಚಂದ್ರಶೇಕರ್ ಅವರಿಗೆ ಸನ್ಮಾನ ಮಾಡಲಾಯಿತು ಮತ್ತು ಕೈಗಡಿಯಾರವನ್ನು ಉಡುಗರೆಯಾಗಿ ನೀಡಲಾಯಿತು. ಇವರೊಂದಿಗೆ ಕಾರ್ಯನಿರ್ವಹಿಸಿದ ವಿವಿಧ ವಿಭಾಗಗಳ ಅಧಿಕಾರಿಗಳು ಶಾಲು ಮತ್ತು ಹೂವಿನ ಮಾಲೆ ಹಾಗೂ ಬೊಕ್ಕೆಗಳನ್ನು ನೀಡುವ ಮೂಲಕ ಸನ್ಮಾನ ಮಾಡಿದರು.
ಜೆಸ್ಕಾಂ ಮುಖ್ಯ ಇಂಜಿನಿಯರ್ ಆರ್.ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕವಿಪ್ರನಿನಿ ಮುಖ್ಯ ಇಂಜಿನಿಯರ್ ಗಿರಿಧರ ಕುಲಕರ್ಣಿ, ಮುಖ್ಯ ಆರ್ಥಿಕ ಅಧಿಕಾರಿ ಸಂತೋಷ ಹೆಬಾರೆ, ಮುಖ್ಯ ಇಂಜಿನಿಯರ್ ಲಕ್ಷ್ಮಣ ಚವ್ಹಾಣ, ಪ್ರಸರಣ ವಿಬಾಗದ ನಿರ್ದೇಶಕ(ಬೆಂಗಳೂರು) ಎಸ್. ಸುಮಂತ, ತಾಂತ್ರಿಕ ನಿರ್ದೇಶಕ (ಬೆಂಗಳೂರು) ಜಿ.ಅಶೋಕಕುಮಾರ, ಗೋಧೆ ಗುಂಡಪ್ಪ, ರಜಾಕ ಮಿಯಾ, ಜೆ.ಎಮ್ ಕರುಣಾಕರ ಶೆಟ್ಟಿ, ಎಮ್.ಪಿ.ನಾಗರಾಜ, ಸಲಿಂ ಪಟೇಲ್ ಸೇರಿದಂತೆ ಜೆಸ್ಕಾಂನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಅವರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.