ಕಿರಿಯರಿಗೆ ಮಾರ್ಗದರ್ಶಕರಾಗಿರಿ: ಇಒ ಬಸವರಾಜ ಐನಾಪುರ
ವಿಜಯಪುರ,ಆ.1:ವಯೋನಿವೃತ್ತಿ ಹೊಂದಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿ.ಪಿ.ಉಪ್ಪಲದಿನ್ನಿ ಅವರ ಬಿಳ್ಕೋಡುಗೆ ಸಮಾರಂಭ ತಿಕೋಟಾ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ನಡೆಯಿತು.
ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪುರ ಅವರು ಮಾತನಾಡಿ, ನಿವೃತ್ತಿ ಅನ್ನುವುದು ವೃತ್ತಿ ಜೀವನದ ಒಂದು ಸಹಜ ಪ್ರಕ್ರಿಯೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಎಂಬ ಹುದ್ದೆ ನಿಜಕ್ಕೂ ತುಂಬಾ ಒತ್ತಡ ಇರುವ ಹುದ್ದೆ. ಇರುವ ಸವಾಲುಗಳನ್ನು ಅತ್ಯಂತ ಸಮಾಧಾನಕರವಾಗಿ ನಿಭಾಯಿಸಿ, ಅತ್ಯಂತ ಯಶಸ್ವಿ ಪಿಡಿಒ ಆಗಿ ಉಪ್ಪಲದಿನ್ನಿ ಅವರು ಹೊರ ಹೊಮ್ಮಿದ್ದಾರೆ. ಅವರ ಭಾವಿ ಜೀವನ ಅತ್ಯಂತ ಸುಖಕರವಾಗಿರಲಿ ಎಂದು ಶುಭ ಕೋರಿದರು.
ನಿವೃತ್ತಿ ಅನ್ನುವುದು ಜೀವನದ ಅಂತ್ಯವಲ್ಲ, ಅದು ಹೊಸ ಅಧ್ಯಾಯದ ಆರಂಭಕ್ಕೆ ಮುನ್ನುಡಿ ಎಂದರು. ಆಡಂಬರವಲ್ಲದ ಜೀವನ, ಸರಳ ಸಜ್ಜನಿಕೆಗೆ ಉಪ್ಪಲದಿನ್ನಿ ಹೆಸರುವಾಸಿಯಾಗಿದ್ದರು ಎಂದೂ ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಪಿ.ಉಪ್ಪಲದಿನ್ನಿ ಅವರು, ಎಲ್ಲ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಒಂದು ಸಹಾಯ ಸಹಕಾರದಿಂದ ನನ್ನ ವೃತ್ತಿ ಜೀವನ ಅತ್ಯಂತ ಸರಾಗವಾಗಿ ಸಾಗಿದೆ. ಕೆಲವೊಂದು ಸಾರಿ ವೃತ್ತಿ ಜೀವನದಲ್ಲಿ ಒತ್ತಡಗಳು ಎದುರಾಗುವುದು ಸಹಜ. ಅದನ್ನು ನಕಾರಾತ್ಮಕವಾಗಿ ಪರಿಗಣಿಸದೇ, ಸಕಾರಾತ್ಮಕವಾಗಿ ಸ್ವೀಕರಿಸಿ, ಅವುಗಳನ್ನು ಮೆಟ್ಟಿ ನಿಂತು ವೃತ್ತಿ ಜೀವನದಲ್ಲಿ ಗೆದ್ದು ಬರಬೇಕು ಎಂದರು.
ಗೊತ್ತಿಲ್ಲದ ವಿಷಯಗಳನ್ನು ಕಲಿಯಲು ವಯಸ್ಸಿನ ಅಡಚಣೆ ಮಾಡಿಕೊಳ್ಳಬಾರದು. ಚಿಕ್ಕ ವಯಸ್ಸಿನವರಲ್ಲಿಯೂ ನಮಕ್ಕಿಂತ ಹೆಚ್ಚಿನ ಜ್ಞಾನವಿರುತ್ತದೆ. ಅದನ್ನು ಬಳಸಿಕೊಂಡು ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು.
ನAತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಸುರೇಶ ಕಳ್ಳಿಮನಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂತೋಷಕುಮಾರ ಬಿರಾದಾರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕಿ ಜಯಶ್ರೀ ಪೂಜಾರಿ, ಸಹಾಯಕ ನಿರ್ದೇಶಕಿ ಶೋಭಕ್ಕ ಶಿಳೀನ ಮತ್ತಿತ್ತರು ಮಾತನಾಡಿದರು. ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯ ಮೇಲೆ ತಾಲೂಕು ಯೋಜನಾಧಿಕಾರಿ ಆಯೇಷಾ ಸಾಲೋಟಗಿ, ಪಿಡಿಒ ಸಂಘದ ತಾಲೂಕಾಧ್ಯಕ್ಷ ಸುರೇಶ ಕಳ್ಳಿಮನಿ, ಬಿ.ಇಪಿ. ಉಪ್ಪಲದಿನ್ನಿ ಕುಟುಂಬವರ್ಗ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿ ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.