ಮನೆ ಹಾನಿಗೀಡಾದ ಸಂತ್ರಸ್ತರಿಗೆ ತುರ್ತು ಪರಿಹಾರಕ್ಕೆ ಒತ್ತಾಯ
ಬೀದರ್:ಆ.1: ಅತಿವೃಷ್ಟಿಯಿಂದ ಮನೆಗಳು ಹಾನಿಗೀಡಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ರಾಜ್ಯ ಸರ್ಕಾರ ತುರ್ತು ಪರಿಹಾರ ಒದಗಿಸಿ ನೆರವಿಗೆ ಬರಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದ್ದಾರೆ.
ದಕ್ಷಿಣ ಕ್ಷೇತ್ರದ ಕಮಠಾಣಾ, ಖಾಶೆಂಪುರ(ಪಿ), ಕಾಡವಾದ, ಚಟನಳ್ಳಿ, ಬಗದಲ್, ಸಿಂದೋಲ್, ರಾಜಗೀರಾ ಸೇರಿದಂತೆ ಇನ್ನಿತರೆ ಗ್ರಾಮಗಳಿಗೆ ಮಂಗಳವಾರ ಹಾಗೂ ಬುಧವಾರ ಭೇಟಿ ನೀಡಿ ಅತಿವೃಷ್ಟಿಯಿಂದಾದ ಮನೆ ಹಾನಿ ಪರಿಶೀಲಿಸಿ ಮಾತನಾಡಿದ ಅವರು, ವಿಪತ್ತಿನ ಕಾಲದಲ್ಲಿ ಪರಿಹಾರ ನೀಡಲು ಸರ್ಕಾರ ಹಿಂದೇಟು ಹಾಕಬಾರದು. ಜಿಲ್ಲಾಡಳಿತವು ಬೇಗ ಹಾನಿ ಸಮೀಕ್ಷೆ ನಡೆಸಿ ಸಂತ್ರಸ್ತರ ನೆರವಿಗಾಗಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಳೆದ ಎರಡು ವಾರಗಳಿಂದ ಜಿಲ್ಲಾದ್ಯಂತ ಮಳೆಯಾಗುತ್ತಿದೆ. ಮಳೆಯಿಂದ ಬೆಳೆಗಳಿಗೆ ಉತ್ತಮವಾಗಿದೆ. ಆದರೆ ಸಾಕಷ್ಟು ಮನೆಗಳಿಗೆ ಹಾನಿ ತಂದಿಟ್ಟಿದೆ. ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಮನೆಗಳು ಹಾನಿಯಾದ ಬಗ್ಗೆ ಸದ್ಯಕ್ಕೆ ಅಂದಾಜು ಮಾಡಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಪೂರ್ಣ ಮತ್ತು ಭಾಗಶಃ ಮನೆ ಬಿದ್ದ ಅನೇಕ ಬಡವರು, ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಈ ವಿಷಯದಲ್ಲಿ ವಿಳಂಬ ಮಾಡದೆ ತುರ್ತು ಪರಿಹಾರ ನೀಡಬೇಕು ಎಂದರು.
ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತವಿದ್ದಾಗ ಪೂರ್ಣ ಮನೆ ಹಾನಿಯಾದವರಿಗೆ 5 ಲಕ್ಷ ರೂ., ಭಾಗಶಃ ಮನೆ ಹಾನಿಗೀಡಾಗಿದ್ದರೆ 2.50 ಲಕ್ಷ ರೂ.ಪರಿಹಾರ ನೀಡಲಾಗುತ್ತಿತ್ತು. ತಾತ್ಕಾಲಿಕವಾಗಿ ತಕ್ಷಣಕ್ಕೆ 10 ಸಾವಿರ ರೂ. ನೀಡಿ ಸಂತ್ರಸ್ತರ ನೆರವಿಗೆ ಬರಲಾಗುತ್ತಿತ್ತು. ಆದರೆ ಈಗಿನ ಸರ್ಕಾರ ಪರಿಹಾರ ಮೊತ್ತ ದಿಢೀರ್ ಕಮ್ಮಿ ಮಾಡಿದೆ. ಪೂರ್ಣ ಮನೆ ಬಿದ್ದರೂ ಗರಿಷ್ಠ 1.25 ಲಕ್ಷ ರೂ. ನೀಡಲು ಘೋಷಿಸಿದ್ದು ಅನ್ಯಾಯದ ಪರಮಾವಧಿ. ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸಲು ಹೆಣಗಾಡುತ್ತ ಬಡವರ ಹೊಟ್ಟೆ ಮೇಲೆ ಮಣ್ಣು ಹಾಕುವ ಕೆಲಸ ಮಾಡುತ್ತಿದೆ. ಈ ಸರ್ಕಾರಕ್ಕೆ ಬಡವರ, ರೈತರ, ಸಂತ್ರಸ್ತರ ಕಾಳಜಿಯಿದ್ದರೆ ಹಿಂದಿನ ಸರ್ಕಾರ ನೀಡಿದಂತೆಯೇ ಪರಿಹಾರ ಘೋಷಿಸಲಿ ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬೀದರ್ ದಕ್ಷಿಣ ಸೇರಿದಂತೆ ವಿವಿಧೆಡೆ ಖುದ್ದು ಭೇಟಿ ನೀಡಿ ಅತಿವೃಷ್ಟಿ ಹಾನಿಯ ಪರಿಶೀಲನೆ ನಡೆಸಿದ್ದಾರೆ. ಬಡವರ, ರೈತರ ಹಿತದಿಂದ ಅವರು ಸಹ ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಹಾಳಾಗಿರುವ ರಸ್ತೆ, ಸಣ್ಣ ಸೇತುವೆಗಳ ದುರಸ್ತಿಗಾಗಿ ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಮುಖರಾದ ಗುರುನಾಥ ಎಂ.ರಾಜಗೀರಾ ಬಗದಲ್, ಚಂದ್ರಯ್ಯಾ ಸ್ವಾಮಿ, ಸಂಜುಕುಮಾರ ಕೋಳಿ, ಸುರೇಶ ಮಾಶೆಟ್ಟಿ, ಜಗನ್ನಾಥ ಸಿರಕಟನಳ್ಳಿ, ಮಾಣಿಕಪ್ಪ ಖಾಶೆಂಪುರ, ಶಿವಕುಮಾರ ಸ್ವಾಮಿ, ಓಂಕಾರ ಮಜಗೆ, ಕುಶಾಲರಾವ ಯಾಬಾ, ನಾಗಭೂಷಣ ಕಮಠಾಣೆ, ಉಮೇಶ ಯಾಬಾ, ಬಸವರಾಜ ಕ್ಯಾಸಾ, ರವಿ ಬಾಲೆಬಾಯಿ, ಮನ್ಮಥ ಕಾಡವಾದ, ಘಾಳೆಪ್ಪ ಚಟನಳ್ಳಿ, ಧನರಾಜ ಯಾದವ್, ಬಸವರಾಜ ಆಣದೂರ, ಜನಾರ್ಧನ ರೆಡ್ಡಿ, ಚಂದ್ರಶೇಖರ ಶೇಖಾಪುರ, ಗುಂಡಪ್ಪ ಮೇತ್ರೆ, ಗ್ರಾಪಂ, ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.