ಸಹಕಾರಿ ಕಾಯ್ದೆಗೆ ತಿದ್ದುಪಡಿ ತಂದು ಸಹಕಾರಿ ತತ್ವಕ್ಕೆ ತಿಲಾಂಜಲಿ ಇಟ್ಟ ರಾಜ್ಯ ಸರ್ಕಾರ: ಗುರುನಾಥ ಜ್ಯಾಂತಿಕರ್
ಬೀದರ್:ಆ.1: ಕರ್ನಾಟಕ ರಾಜ್ಯ ಸರ್ಕಾರವು ವಿಧಾನ ಸಭೆಯ ಅಧಿವೇಶನದಲ್ಲಿ ಸಹಕಾರ ಸಂಘಗಳ ಕಾಯ್ದೆ 1959. ಹಾಗೂ ಸೌಹಾರ್ದ ಸಹಕಾರಿ ಅಧಿನಿಯಮ 1997ಕ್ಕೆ ತಿದ್ದುಪಡಿ ಮಾಡುವ ಮೂಲಕ ಸಹಕಾರ ತತ್ವಗಳಿಗೆ ತಿಲಾಂಜಲಿ ಹೇಳಿದೆ ಎಂದು ಬೀದರ್ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕರಾದ ಗುರುನತ ಜ್ಯಾಂತಿಕರ್ ಹೇಳಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ಸಹಕಾರ ಸಂಘಗಳು ಸಹಕಾರಿಯ ತತ್ತ್ವದಡಿಯಲ್ಲಿ ಅಂದರೆ ಈ ಮೇಲಿನ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿವೆ. ಸಹಕಾರ ಚಳುವಳಿ ಕಳೆದ 120 ವರ್ಷದ ಇತಿಹಾಸ ಹೊಂದಿದೆ. ಸಹಕಾರ ಸಂಸ್ಥೆ ಎಂದರೆ ಒಂದು ಜಂಟಿ ಸ್ವಾಮ್ಯದ ಮತ್ತು ಪ್ರಜಾಸತ್ತಾತ್ಮಕ ನಿಯಂತ್ರಿತ ಉದ್ಯಮದ ಮೂಲಕ ಅವರ ಸಾಮಾನ್ಯ ಆರ್ಥಿಕ, ಸಾಮಾಜಿಕ ಮತ್ತು ಸಂಸ್ಕೃತಿಕ ಅಗತ್ಯತೆಗಳನ್ನು ಮತ್ತು ಆಕಾಂಕ್ಷಗಳನ್ನು ಪೂರೈಸಲು ಸ್ವಯಂ ಪ್ರೇರಣೆಯಿಂದ ಒಗ್ಗೂಡುವ ವ್ಯಕ್ತಿಗಳ ಸ್ನಾಯತ್ ಸಂಸ್ಥೆಗಳಾಗಿವೆ ಎಂದರು.
ಸಹಕಾರ ತತ್ವಗಳನ್ನು ವಿಶ್ವದ ಎಲ್ಲಾ ದೇಶಗಳು ಒಪ್ಪಿಕೊಂಡಿವೆ. ಆದರೇ ನಮ್ಮ ರಾಜ್ಯ ಸರ್ಕಾರ ಅದರ ವಿರುದ್ಧವಾಗಿ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಪ್ರಸ್ತುತ ಸರ್ಕಾರವು ಸಹಕಾರ ಸಂಘಗಳ ಅಧಿನಿಯಮ 2 ನ್ನು ತಿದ್ದುಪಡಿಮಾಡಿ ನೆರವು ಪಡೆದ ಸಂಘವೆAದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಪಡೆದಿದ್ದರೆ ಎನ್ನುವ ವ್ಯಾಖ್ಯಾನ ನೀಡಿರುತ್ತಾರೆ. ರಾಜ್ಯ ಸರ್ಕಾರವು ಪ್ರತಿಯೊಂದು ನೆರವು ಪಡೆದ ಸಂಘಗಳ ಮಂಡಳಿಗೆ ಅದರ ಪ್ರತಿನಿಧಿಗಳನ್ನಾಗಿ ಮೂರು ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡಬಹುದು ಎಂದು ಸೇರಿಸಿರುತ್ತಾರೆ. ಇದು ಚಳುವಳಿಗೆ ಮಾರಕವಾಗಿದೆ. ಅಷ್ಟೆ ಅಲ್ಲದೆ ಸದರಿ ವ್ಯಕ್ತಿಗಳಿಗೆ ಮತ ಚಲಾಯಿಸುವ ಹಕ್ಕು ನೀಡಿರುತ್ತಾರೆ. ಇದು ಸಹಕಾರ ಚಳುವಳಿಗೆ ವಿರುದ್ಧವಾಗಿದೆ ಎಂದವರು ಹೇಳಿದರು.
ಸಹಕಾರ ಸಂಘಗಗಳ ಕಾಯ್ದೆ ಕಲಂ 48(ಜಿ) ಗೆ ತಿದ್ದುಪಡಿ ಮಾಡಿ ರಾಜ್ಯ ಸಹಕಾರ ಬ್ಯಾಂಕಿನ ಅಥವಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಡಳಿತ ಮಂಡಳಿಯಲ್ಲಿ ಸರ್ಕಾರದ ಮೂವರು ನಾಮನಿರ್ದೇಶಿತ ಸದಸ್ಯರು ಇರತಕ್ಕದು ಎಂದು ಸೇರಿಸಿರುತ್ತಾರೆ ಎಂದವರು ಹೇಳಿದರು.
ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 63 ಹಾಗೂ ಸೌಹಾರ್ದ ಸಹಕಾರ ಅಧಿನಿಯಮ 1997ರ ಕಲಂ 33ಕ್ಕೆ ತಿದ್ದುಪಡಿ ಮಾಡುವ ಮೂಲಕ ಮೂರು ವರ್ಷಕ್ಕೆ ಒಮ್ಮೆ ಪ್ರತಿಯೊಂದು ಸಹಕಾರ ಸಂಘವು ತನ್ನ ಲೆಕ್ಕ ಪತ್ರವನ್ನು ಲೆಕ್ಕ ಪರಿಶೋಧನಾ ಇಲಾಖೆ ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆಯನ್ನು ಮಾಡಿಸತಕ್ಕದು ಎಂದು ತಿದ್ದುಪಡಿ ಮಾಡಲಾಗಿದೆ. ಇದರಿಂದ ಸಹಕಾರಿಗಳಿಗೆ ಆರ್ಥಿಕ ಹೊರೆಯಾಗುತ್ತದೆ ಹಾಗೂ ಕೇಲಸದ ಒತ್ತಡವು ಹೆಚ್ಚಾಗುತ್ತದೆ. ಏಕೆಂದರೆ ರಾಜ್ಯ ಸಹಕಾರ ಲೆಕ್ಕ ಪರಿಶೋಧನಾ ಇಲಾಖೆ ಮಾಡಿರುವ ಲೆಕ್ಕ ಪರಿಶೋಧನಾ ವರದಿಯನ್ನು ಆದಾಯ ತೆರಿಗೆ ಇಲಾಖೆಯು ಸ್ವೀಕರಿಸುವುದಿಲ್ಲ ಪುನ: ಸನ್ನದು ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆ ನಡೆಸಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗಿರುತ್ತದೆ.
ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 21 ಹಾಗೂ ಸೌಹಾರ್ದ ಸಹಕಾರ ಅಧಿನಿಯಮ 1997ರ ಕಲಂ : 54ಕ್ಕೆ ತಿದ್ದುಪಡಿ ಮಾಡಿ ಮಾಧ್ಯಮಿಕ ಸಹಕಾರ ಸಂಘಗಳು, ಫೇಡರಲ್ ಸಹಕಾರ ಸಂಘಗಳು ಅಪೇಕ್ಸ್ ಮಂಡಳಿಯಲ್ಲಿ ಮೀಸಲಾತಿ ಸ್ನಾನವನ್ನು ಸೇರಿಸುವುದರಿಂದ ವೈಧ್ಯನಾಥನ ವರದಿ ಹಾಗೂ ಸಂವಿಧಾನದ 97ನೇ ತಿದ್ದುಪಡಿಯ ವಿರುದ್ಧವಾಗಿದೆ ಎಂದು ಹೇಳಿದರು.
ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 28 ಹಾಗೂ ಸೌಹಾರ್ದ ಸಹಕಾರ ಅಧಿನಿಯಮ 1997ರ ಕಲಂ 24ಕ್ಕೆ ತಿದ್ದುಪಡಿ ಮಾಡುವ ಮೂಲಕ ಅನಾವಶ್ಯಕವಾಗಿ ಆಡಳಿತ ಮಂಡಳಿಯ ಸಂಖ್ಯೆಯನ್ನು ಹೆಚ್ಚಿಸಲು ಅವಕಾಶ ಮಾಡಿಕೊಡುವುದರಿಂದ ಸಹಕಾರ ಸಂಘಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಇದನ್ನು ತಡೆಯು ದೃಷ್ಟಿಯಿಂದ ಸಂವಿಧಾನದ 97ನೇ ತಿದ್ದುಪಡಿಮಾಡಿ ಆಡಳಿತ ಮಂಡಳಿಯ ನಿರ್ದೇಶಕರ ಸಂಖ್ಯೆಗೆ ಕಡಿವಾಣ ಹಾಕಲಾಗಿತ್ತು.
ಒಟ್ಟಾರೆ ರಾಜ್ಯ ಸರ್ಕಾರುವು ಸಹಕಾರ ಚಳುವಳಿಯನ್ನು ಹತ್ತಿಕ್ಕೂವ ಹಾಗೂ ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಮತ್ತು ರಾಜಕೀಯ ಹಸ್ತಕ್ಷೇಪ ಮಾಡಲು ಹೊರಟಿದೆ. ಈ ರೀತಿಯ ತಿದ್ದುಪಡಿ ಮಾಡಿದ ಅನೇಕ ಸಂದರ್ಭದಲ್ಲಿ ನ್ಯಾಯಾಲಯಗಳು ಈ ತಿದ್ದುಪಡಿಗಳ ವಿರುದ್ಧವಾಗಿ ತೀರ್ಪು ನೀಡಿರುತ್ತವೆ ಎಂದರು.
ಸರ್ಕಾರಕ್ಕೆ ನಿಜವಾಗಿಯು ಬಡವರ ಹಾಗೂ ಹಿಂದುಳಿದವರ ಹಾಗೂ ದಲಿತರ ಬಗ್ಗೆ ಕಾಳಜಿ ಹೊಂದಿದ್ದರೆ, ಸರ್ಕಾರವು ಆಯಾ ಸಮುದಾಯದವರಿಗೆ ಷೇರು ಹಣ ಅನುದಾನ ರೂಪದಲ್ಲಿ ನೀಡಿ ಆಯಾ ಸಮುದಾಯಕ್ಕೆ ಒಂದು ಒಂದು ಸಹಕಾರ ಸಂಘವನ್ನು ಮಾಡಿಕೊಡಲು ಕಾಯ್ದೆಯಲ್ಲಿ ಪ್ರಾವಧಾನವಿದೆ. ಈ ರೀತಿ ಮಾಡಿದರೆ ಆ ಜನಾಂಗದ ಏಳಿಗೆ ಮಾಡಲು ಸಾಧ್ಯವಾಗುತ್ತದೆ. ಕೇವಲ ಯಾವುದೇ ಸಂಘದಲ್ಲಿ ರಾಜಕೀಯ ಬಾಲಂಗೋಚಿಗಳಿಗೆ ನಾಮ ನಿರ್ದೇಶನ ಮಾಡುವುದರಿಂದ ಹಾಗೂ ಮೀಸಲಾತಿ ಕಲ್ಪಿಸುವುದರಿಂದ ಅವರ ಏಳಿಗೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಒಂದು ರಾಜಕೀಯ ತಂತ್ರ ಅಷ್ಟೆ. ಅದಕ್ಕಾಗಿ ಸಹಕಾರಿಗಳು ರಾಜ್ಯ ಸರ್ಕಾರ ಮಾಡಿರುವ ಸಹಕಾರ ಸಂಘಗಳ ಕಾಯ್ದೆ ಹಾಗೂ ಸೌಹಾರ್ದ ಸಹಕಾರ ಕಾಯ್ದೆ ತಿದ್ದುಪಡಿಯನ್ನು ಸಹಕಾರ ತತ್ವಗಳ ಆಶೆಯಕ್ಕೆ ವಿರುದ್ಧವಾಗಿರುವುದರಿಂದ ಇದನ್ನು ತಿವುವಾಗಿ ವಿರೋಧಿಸುತ್ತೇವೆ ಎಂದು ಜ್ಯಾಂತಿಕರ್ ತಿಳಿಸಿದರು.
ಸಂಘದ ಸದಸ್ಯರಾದ ಸಂಜಯ ಖ್ಯಾಸಾ, ಸೂರ್ಯಕಾಂತ ಮಠಪತಿ, ಶ್ರೀಕಾಂತ ಸ್ವಾಮಿ ಸೋಲಪುರ, ಸಂಜುಕುಮಾರ ಸಜ್ಜನ್, ಕ್ರಾಂತಿಕುಮಾರ ಕುಲಾಲ್, ನಾಗಶೆಟ್ಟಿ ಪಾಟೀಲ, ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ ಹಾಗೂ ಇತರರರು ಪತ್ರಿಕಾಗೋಷ್ಟಿಯಲ್ಲಿದ್ದರು.