ಸಹಕಾರ ಸಂಘ ಕಾಯ್ದೆ: ಅಂತಿಮ ವರದಿ ಸಲ್ಲಿಕೆ
ಬೆಂಗಳೂರು.ಆ.೧- ಕರ್ನಾಟಕ ಸಹಕಾರ ಸಂಘಗಳ ಕಾಯಿದೆ, ಸೌಹಾರ್ದ ಕಾಯಿದೆ ಹಾಗೂ ನಿಯಮಗಳ ಅಧ್ಯಯನ ಸಮಿತಿಯ ಅಂತಿಮ ವರದಿಯನ್ನು ಸಮಿತಿಯ ಅಧ್ಯಕ್ಷ ಲಕ್ಷ್ಮಣ ಸಂಗಪ್ಪ ಸವದಿ ಅವರು ಅಧ್ಯಯನ ಸಮಿತಿಯ ಅಂತಿಮ ವರದಿಯನ್ನು ಸಹಕಾರ ಸಚಿವರಾದ ಕೆ.ಎನ್. ರಾಜಣ್ಣಗೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಲ್ಲಿ ನಡೆದ ಸಭೆಯಲ್ಲಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳಾದ ಶಾಸಕ ಕೆ.ಷಡಾಕ್ಷರಿ, ಮಾಜಿ ಸಚಿವ ಎಸ್.ಆರ್. ಪಾಟೀಲ್, ರಾಜ್ಯ ಮಾರಾಟ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್, ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ, ಸಹಕಾರ ಇಲಾಖೆಯ ವಿಶೇಷ ಕರ್ತವ್ಯಾಧಿಕಾರಿ ಎ.ಸಿ. ದಿವಾಕರ್, ಅಪರ ನಿಬಂಧಕರಾದ ಕೆ.ಎಸ್. ನವೀನ್, ಜಂಟಿ ನಿಬಂಧಕರಾದ ಕಲ್ಲಪ್ಪ ಓಬಣ್ಣಗೋಳ, ಲಕ್ಷ್ಮೀಪತಯ್ಯ, ನಿವೃತ್ತ ಅಪರ ನಿಬಂಧಕರುಗಳಾದ ಹೆಚ್.ಎಸ್. ನಾಗರಾಜಯ್ಯ, ಜಿ.ಎಸ್. ರಮಣರೆಡ್ಡಿ, ಸಿ.ಎನ್. ದೇವರಾಜ್ ಅವರುಗಳು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ ಮತ್ತು ನಿಯಮಗಳು ೧೯೬೦ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ೧೯೯೭ ಮತ್ತು ನಿಯಮಗಳು ೨೦೦೪ ಗಳಿಗೆ ಕಾನೂನಾತ್ಮಕ ತಿದ್ದುಪಡಿ ತರುವ ಸಂಬಂಧ ಸಹಕಾರಿ ಮುಖಂಡರುಗಳು ಮತ್ತು ಸಹಕಾರ ಇಲಾಖೆಯ ನಿವೃತ್ತ ಅಧಿಕಾರಿಗಳ ತಂಡದ ಅಧ್ಯಯನ ಸಮಿತಿಯನ್ನು ಶಾಸಕ ಲಕ್ಷ್ಮಣ ಸಂಗಪ್ಪ ಸವದಿ ಅವರ ಅಧ್ಯಕ್ಷತೆಯಲ್ಲಿ ಕಳೆದ ವರ್ಷ ರಚಿಸಲಾಗಿತ್ತು.