ಬೆಂಗಳೂರಿನಲ್ಲಿ ಆ.೩ಕ್ಕೆ ನಾಗರ ಪಂಚಮಿ ಸಂಭ್ರಮ
ಬೆಂಗಳೂರು ಜು. ೩೦ :ಉತ್ತರ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ಅತ್ಯಂತ ಸಡಗರದಿಂದ ಸಂಭ್ರಮಿಸುವ ನಾಗಪಂಚಮಿ ಹಬ್ಬದ ಆಚರಣೆಯನ್ನು ಇದೇ ಶನಿವಾರ ದಿನಾಂಕ ೦೩-೦೮-೨೦೨೪ರಂದುಬೆಳಗ್ಗೆ ೧೦ ಗಂಟೆಯಿಂದ ಸಂಜೆ ೪:೦೦ ವರೆಗೆ ಬೆಂಗಳೂರಿನ ಅರಮನೆ ಮೈದಾನದ ಆವರಣದಲ್ಲಿರುವ, ಗಾಯತ್ರಿ ವಿಹಾರ ಪ್ರವೇಶ, ವೃಕ್ಷ ಸಂಪ್ರದಾಯಿಕ ಕಲಾಮಂಟಪದಲ್ಲಿ ಆಯೋಜಿಸಲಾಗಿದೆ.
ಇದು ಗ್ರಾಮೀಣ ಸೊಗಡು ಹೊಂದಿರುವ ಹಬ್ಬವಾಗಿದ್ದು, ಸಂಪೂರ್ಣ ಗ್ರಾಮೀಣ ಶೈಲಿಯಲ್ಲಿಯೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಆಚರಣೆಯಲ್ಲಿ ಮಹಿಳೆಯರು ಗ್ರಾಮೀಣ ಸಾಂಪ್ರದಾಯಿಕ ಇಲಕಲ್ ಸೀರೆ ತೊಟ್ಟು ಗ್ರಾಮೀಣ ಆಟೋಟ, ಕೋಲಾಟ, ಡೊಳ್ಳು ಕುಣಿತ, ಪಗಡಿ ಸೇರಿದಂತೆ ಹತ್ತಾರು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ಮಿಸ್ ಯುನಿವರ್ಸ್ ಪೆಟೈಟ್ ೨೦೨೪ ಕಿರೀಟ ಮುಡಿಗೇರಿಸಿಕೊಂಡಿರುವ ಡಾ. ಶೃತಿ ಹೆಗಡೆ ಅವರಿಂದ ಫ್ಯಾಶನ್ ಶೋ ಏರ್ಪಡಿಸಲಾಗಿದೆ.
ಹಾಸ್ಯ ಕಲಾವಿದೆ ಶ್ರೀಮತಿ ಸಾಲಿಮಠ ಅವರಿಂದ ಹಾಸ್ಯ ಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಜೊತೆಗೆ ಸೇವಿಗೆ ಹೊಸೆಯುವುದು, ರೊಟ್ಟಿ ಬಡಿಯುವುದು, ಆಡಿನ ಹಾಲು ಕರೆಯುವುದು, ಕೋಳಿ ಹಿಡಿಯುವುದು, ಹೀಗೆ ಹತ್ತಾರು ಸ್ಪರ್ಧೆಗಳನ್ನು ಸಹ ಆಯೋಜಿಸಲಾಗಿದೆ.
ಕಲಾಮಂಟಪವನ್ನು ಸಂಪೂರ್ಣ ಹಳ್ಳಿ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದ್ದು, ಹಾಲಿ ಹಾಗೂ ಮಾಜಿ ಸಚಿವೆ – ಶಾಸಕಿಯರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ಮಹಿಳೆಯರು ಭಾಗವಹಿಸಲಿದ್ದಾರೆ. ಈ ಹಬ್ಬವನ್ನು ಅತ್ಯಂತ ವರ್ಣರಂಜಿತವಾಗಿ ಆಯೋಜಿಸಿದ್ದು,ಮಹಿಳೆಯರಿಗೆ ಮಾತ್ರ ಅವಕಾಶವಿರುತ್ತದೆ ಎಂದು ನಮ್ಮೂರ ನಾಗರ ಪಂಚಮಿ ವೇದಿಕೆ ಅಧ್ಯಕ್ಷೆ ಊರ್ಮಿಳಾ ಕಳಸದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ೯೪೪೯೩೪೯೭೪೭/೯೮೪೫೯೫೪೨೧೮/೯೮೪೫೩೨೦೩೨೬