ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ
ಗದಗ,ಆ೧: ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗಾಗಿದ್ದು ಇದನ್ನು ತಡೆಗಟ್ಟುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ ಹೆಣ್ಣುಮಕ್ಕಳಿಗೆ ಮೋಸ ಮಾಡಿ ಪಾಲಕರಿಂದ ಬೇರ್ಪಡಿಸಿ ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳುವುದು ಹಾಗೂ ಮಕ್ಕಳನ್ನು ಅಪಹರಿಸಿ ಬಿಕ್ಷಾಟನೆಗೆ ಕಳುಹಿಸುವುದು ಇವೆಲ್ಲ ಮಾನವ ಕಳ್ಳ ಸಾಗಾಣಿಕೆಗಳಾಗಿವೆ. ಪ್ರಸ್ತುತ ಕಾಲದಲ್ಲಿ ಬಡತನವೊಂದೇ ಇದಕ್ಕೆ ಕಾರಣವಾಗಿರುವುದಿಲ್ಲ ಅದರೊಂದಿಗೆ ಅರಿವಿನ ಅಥವಾ ಜಾಗೃತಿಯ ಕೊರತೆ ಮುಖ್ಯವಾಗಿದೆ. ಆದಕಾರಣ ಕಾಲೇಜು ಯುವತಿಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಯಾವುದೇ ಕಾರಣಕ್ಕೂ ಯಾರಿಂದಲೂ ಪ್ರಲೋಭನೆಗೆ ಒಳಗಾಗಬಾರದು, ಮೊಬೈಲ್‌ನ ಮುಖಾಂತರ ಆಕರ್ಷಣೆಗೆ ಮತ್ತು ಆಸ್ತಿ ಅಮಿಷಗಳಿಗೆ ಒಳಗಾಗಿ ಮೋಸಹೋಗಬಾರದು. ಮಾನವ ಕಳ್ಳ ಸಾಗಾಣಿಕೆ ತಡೆಗಾಗಿ ತಮ್ಮ ಸುತ್ತ ಮುತ್ತಲಿನರಿಗೆ ಅರಿವು ಮೂಡಿಸುವುದು ಮುಖ್ಯವಾಗಿದೆ ಎಂದರು.
ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾಂiರ್Àದರ್ಶಿ ಸಿ.ಎಸ್.ಶಿವನಗೌಡ್ರ ಮಾತನಾಡಿ ಮಹಿಳೆ ಮತ್ತು ಮಕ್ಕಳನ್ನು ಕಳ್ಳತನ ಮಾಡಿ ಹೊರದೇಶಕ್ಕೆ ಕರೆದುಕೊಂಡು ಹೋಗುವುದು, ಅನೈತಿಕ ಕಾರ್ಯಗಳಿಗೆ ಬಳಸುವುದು, ಮಕ್ಕಳಿಗೆ ಬಿಕ್ಷಾಟನೆ ಯಲ್ಲಿ ತೊಡಗಿಸುವುದು ಹಾಗೂ ಅಪಾಯಕಾರಿ ಕಾರ್ಖಾನೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ತೊಡಗಿಸುವುದು ಬಂದ ಹಣವನ್ನು ವಸೂಲು ಮಾಡುವುದು ಇವೆಲ್ಲವುಗಳು ಮಾನವ ಕಳ್ಳ ಸಾಗಾಣಿಕೆಯ ಮುಖ್ಯ ಉದ್ದೇಶವಾಗಿದೆ. ಇದನ್ನು ತಡೆಗಟ್ಟಲು ಎಲ್ಲ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಹಾಗೂ ಟಾಸ್ಕ್ ಫೋರ್ಸ ಸಮಿತಿ ರಚನೆ ಮಾಡಿಕೊಂಡು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆಯ ನಡೆಸಿ ಚರ್ಚಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇದರ ತಡೆಗಾಗಿ ಎಲ್ಲರೂ ಜಾಗೃರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಅಸೂಟಿ ಅವರು ಮಾತನಾಡಿ ಮಾನವ ಕಳ್ಳಸಾಗಣೆಯು ಹಿಂದಿನ ಕಾಲದಿಂದಲೂಜಾರಿಯಲ್ಲಿದೆ, ಇದೊಂದು ಸಂಘಟಿತವಾಗಿ ಮಾಡುವ ಅಪರಾಧವಾಗಿದ್ದು ಮಾರುಕಟ್ಟೆಯಲ್ಲಿ ಜಾನುವಾರು ಮಾರಾಟದಂತೆ ಮನುಷ್ಯರನ್ನು ಬಹಿರಂಗವಾಗಿ ಮಾರಲಾಗುತ್ತದೆ.
ಆದುನಿಕ ಕಾಲದಲ್ಲಿ ಮಾನವ ಕಳ್ಳ ಸಾಗಣೆ ಮಾಡಿ ಮಸಾಜ್ ಪಾರ್ಲರ್, ಬಾರ್, ಪಬ್, ಗಣಿಗಾರಿಕೆ, ಕೃಷಿ ಚಟುವಟಿಕೆಗಳಾದ ಕಾಫಿ, ರಬ್ಬರ್ ಎಸ್ಟೇಟ್, ಕೆಲಸಗಳಲ್ಲಿ ಅಪಾಯಕಾರಿ ಕ್ಷೇತ್ರಗಳಲ್ಲಿ ಬಳಕೆ ಮಾಡುತ್ತಾರೆ ಮತ್ತು ಕಾನೂನು ಬಾಹಿರವಾಗಿ ಇಚ್ಛಗೆ ವಿರುದ್ಧವಾಗಿ ಬಲವಂತವಾಗಿ ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಿ ಲೈಂಗಿಕವಾಗಿ ಅಶ್ಲೀಲವಾಗಿ ಬಳಸಿಕೊಳ್ಳುತ್ತಾರೆ. ಮಾನವ ಕಳ್ಳಸಾಗಣೆಗೆ ಹೆಚ್ಚಾಗಿ ಹದಿಹರೆಯರು, ವಿಧವೆಯರು, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ, ಅನಕ್ಷರಸ್ಥರು, ನಿರುದ್ಯೋಗಿಗಳು, ಸೇರಿದಂತೆ ಇಂದಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರನ್ನು ನಂಬಿ ಬಲಿಪಶುಗಳಾಗುತ್ತಾರೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಸ್ವಾಗತಿಸಿದರು.ಮಲ್ಲಪ್ಪ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಫೀಕಾ ಹಳ್ಳೂರ ವಂದಿಸಿದರು.