ಮೂರು ಸಾವಿರ ಹೆಣ್ಣು ಕರುಗಳಿಗೆ ಕಂದು ರೋಗ ಲಸಿಕೆ
ಇಂಡಿ:ಆ.೧: ತಾಲೂಕಿನಲ್ಲಿ ಇರುವ ೪ ರಿಂದ ೮ ತಿಂಗಳ ಒಳಗೆ ಇರುವ ಆಕಳು ಅಥವಾ ಎಮ್ಮೆ ಕರುಗಳಿಗೆ ಲಸಿಕೆ ಹಾಕುವ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.
ಪಟ್ಟಣದ ಪುರಸಭೆ ಆಧೀನದಲ್ಲಿ ಬರುವ ಸಾತಪುರ ಗ್ರಾಮದಲ್ಲಿ ಹೆಣ್ಣು ಕರುವಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
೪ ರಿಂದ ೮ ತಿಂಗಳ ಕರುಗಳಿಗೆ ಕಂದು ರೋಗ ಬರುತ್ತಿದ್ದು ಈ ಲಸಿಕೆ ಹಾಕಲಾಗುತ್ತಿದೆ. ಕಂದು ರೋಗ ಬೇಕ್ಟಿರಿಯಾ ರೋಗವಾಗಿದ್ದು ಒಂದು ದನದಿಂದ ಇನ್ನೊಂದು ದನಕ್ಕೂ ಹರಡುತ್ತದೆ. ಹೀಗಾಗಿ ವರ್ಷದಲ್ಲಿ ಒಂದು ಬಾರಿ ಲಸಿಕೆ ನೀಡಲಾಗುತ್ತಿದೆ.
ಈಗಾಗಲೇ ತಾಲೂಕಿನಲ್ಲಿ ಜು ೨೧ ರಿಂದ ಹಾಕಲು ಪ್ರಾರಂಭಿಸಿದ್ದು ಅ. ೧೦ ರ ವರೆಗೆ ಒಟ್ಟು ೩೦೦೦ ಕರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಇದರಿಂದ ಕರುಗಳಿಗೆ ಜೀವಮಾನದಲ್ಲಿ ಗರ್ಭ ಕಟ್ಟಿದಾಗ ಗರ್ಭಪಾತ ಆಗದಂತೆ ಲಸಿಕೆ ತಡೆಯುತ್ತದೆ ಎಂದರು.
ಪಟ್ಟಣದ ಪಶು ಆಸ್ಪತ್ರೆ, ತಾಲೂಕಿನಲ್ಲಿರುವ ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಅದಲ್ಲದೆ ಪಶು ಆಸ್ಪತ್ರೆ ಸಿಬ್ಬಂದಿ ರೈತರ ಹೊಲಗಳಿಗೆ ಹೋಗಿ ಲಸಿಕೆ ನೀಡುತ್ತಾರೆ ಎಂದರು.
ಪಶು ವೈದ್ಯಾಧಿಕಾರಿ ಡಾ. ರವಿಶಂಕರ ಬಿರಾದಾರ, ಡಾ. ವಿನಯ ಜಂಬಗಿ, ಎಸ್.ಎಂ.ಮೂಡಲಗೇರಿ, ಜಾವೇದ ಬಾಗವಾನ, ರಾಮಣ್ಣ ಉಪ್ಪಾರ, ರಮೇಶ ನರಳೆ ಮತ್ತಿತರಿದ್ದರು.