ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣ;  ರಂಭಾಪುರಿ ಶ್ರೀ
ಸಂಜೆವಾಣಿ ವಾರ್ತೆ
ದಾವಣಗೆರೆ- ಜು.೩೧; ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದ ಮೂಲ ಧರ್ಮದ ಆಚರಣೆಯಲ್ಲಿದೆ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಾಕಿರಣವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಮಂಗಳವಾರ ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯ ದೊಡ್ಡ ದೊಡ್ಡ ಮಾತುಗಳನ್ನಾಡುವುದರಿಂದ ದೊಡ್ಡವರಾಗುವುದಿಲ್ಲ. ದೊಡ್ಡ ಮನಸ್ಸು ಗುಣಗಳಿಂದ ದೊಡ್ಡಸ್ತಿಕೆ ಪ್ರಾಪ್ತವಾಗುತ್ತದೆ. ಅರಿತು ಬಾಳುವುದರಲ್ಲಿ ಬದುಕಿನ ಉತ್ಕರ್ಷತೆಯಿದೆ. ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ಗುಣಗಳಿವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ. ದುರ್ಜನರ ಒಡನಾಟದಲ್ಲಿ ಬಾಳಿದರೆ ಬದುಕು ಸರ್ವ ನಾಶವಾಗುತ್ತದೆ. ವೀರಶೈವ ಧರ್ಮ ಸಿದ್ಧಾಂತದಲ್ಲಿ ಜೀವನ ವಿಕಾಸದ ಆಧ್ಯಾತ್ಮ ತತ್ವಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ್ದಾರೆ. ಧರ್ಮ ಯಶಸ್ಸು ನೀತಿ ದಕ್ಷತೆ ಮತ್ತು ಒಳ್ಳೆಯ ಮಾತು ಅಳವಡಿಸಿಕೊಂಡು ಬಾಳಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಯಾರೂ ಮರೆಯಬಾರದು. ಮೂಲ ಮರೆತರೆ ಜೀವನದಲ್ಲಿ ಅವನತಿ ನಿಶ್ಚಿತವೆಂದರು.