ಭಗತ್ ಸಿಂಗ್ ಅವರ ಸಮಾಜವಾದಿ ಭಾರತ ಕಟ್ಟಲು ಸಂಕಲ್ಪ
ಕಲಬುರಗಿ,ಸೆ.29-ಈ ದೇಶದಲ್ಲಿ ಸುಮಾರು 200 ವರ್ಷ ಆಳ್ವಿಕೆ ಮಾಡಿದ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಹೋರಾಡಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಗಲ್ಲುಗಂಬಕ್ಕೇರಿ ಹುತಾತ್ಮರಾಗಿ ಈ ದೇಶದ ವಿದ್ಯಾರ್ಥಿಗಳಿಗೆ ಯುವಜನರಿಗೆ ಸ್ಪೂರ್ತಿಯಾದರು ಭಗತ್ ಸಿಂಗ್ ಅವರು ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ.ಹೇಳಿದರು.
ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಎಐಡಿಎಸ್‍ಐ ಕಛೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವನಿಂದ ಮಾನವ ಶೋಷಣೆ ಮುಕ್ತಿಗೋಳಿಸಿ ಸಮ-ಸಮಾನದ ಸಮಾಜವಾದಿ ಭಾರತ ಕಟ್ಟಬೇಕೆಂಬುವದು ಭಗತ್ ಸಿಂಗ್‍ರ ಕನಸಾಗಿತ್ತು. ಆದರೆ ಇಂದಿಗೂ ಅವರ ಕನಸು ನನಸಾಗಿಲ್ಲ. ಅತ್ಯಂತ ಕೆಟ್ಟ ಪರಿಸ್ತಿತಿಯಲ್ಲಿ ದೇಶವು ಸಾಗುತ್ತಿದೆ. ಶಿಕ್ಷಣವು ಖಾಸಗಿಕರಣಗೊಂಡು ಮಾರಾಟದ ವಸ್ತುವಾಗಿ ದುಡ್ಡಿದ್ದವರ ಸ್ವತ್ತಾಗುತ್ತಿದೆ. ನಮ್ಮನು ಆಳುತ್ತಿರುವ ಸರ್ಕಾರಗಳು ಜಾರಿಮಾಡುತ್ತಿರುವ ನೀತಿಗಳಿಂದಾಗಿ ಬಡ ರೈತ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ನಿರುದ್ಯೋಗ ಬಡತನ ಹಸಿವು ದೇಶದಾದ್ಯಂತ ತಾಂಡವಾಡುತ್ತಿದೆ. ಕೆಳ ಮತ್ತು ವiಧ್ಯಮ ವರ್ಗದ ಜನರು ಕನಿಷ್ಠ ಜೀವನ ನಡೆಸಲು ತತ್ತರಿಸುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರ ಮೇಲೆ ಅತ್ಯಾಚಾರದ ಪ್ರಕರಣಗಖು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಯುವಜನರು ಅನ್ಯಾಯವನ್ನು ಪ್ರಶ್ನಿಸುತ್ತಿದ್ದ ಭಗತ್ ಸಿಂಗ್ ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಇಂದಿನ ಸಮಸ್ಯೆಗಳ ವಿರುದ್ಧ
ಒಗ್ಗಟ್ಟಿನ ಹೋರಾಟ ಕಟ್ಟಲು ಮುನ್ನುಗ್ಗಬೇಕಿದೆ. ಆಗ ಮಾತ್ರ ನಾವು ಭಗತ್ ಸಿಂಗ್ ಅವರಿಗೆ ನೈಜ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯಾನವನ ಶಾಲಾ-ಕಾಲೇಜುಗಳಲ್ಲಿ ಗೌರವಹಿತವಾಗಿ ಭಗತ್ ಸಿಂಗ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ವೆಂಕಟೇಶ್ ದೇವದುರ್ಗ, ಉಪಾಧ್ಯಕ್ಷರಾದ ಪ್ರೀತಿ ದೋಡ್ಢಮನಿ, ಗೋವಿಂದ ಯಳವಾರ, ನಾಗರಾಜ ರಾವೂರ್ ಸದಸ್ಯರಾದ ರಾಹುಲ್, ಯುವರಾಜ್ ವಿದ್ಯಾರ್ಥಿಗಳಾದ ಭೀಮಾಶಂಕರ, ಸುನೀಲ್, ಅಭೀಶೇಕ ಹಾಗೂ ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.