ಧುತ್ತರಗಾಂವ ಶಿವಶಕ್ತಿ ಮಂದಿರದಲ್ಲಿ ನವರಾತ್ರಿ ವೈಭವ
ಕಲಬುರಗಿ,ಸೆ 29: ಅಳಂದ ತಾಲೂಕಿನ ಧುತ್ತರಗಾಂವ ಗ್ರಾಮದ ಶಿವಶಕ್ತಿ ಅಭಿನವ ದೇವಾಲಯದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಅಕ್ಟೋಬರ್ 3 ರಿಂದ 12 ರವರೆಗೆ ಶ್ರೀ ದೇವಿ ಮಹಾತ್ಮೆ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಧುತ್ತರಗಾಂವ ಗ್ರಾಮದ ನವದುರ್ಗ ದೇವಾಲಯದಲ್ಲಿ ಘಟಸ್ಥಾಪನೆ, ಕಳಶ ಸ್ಥಾಪನೆ, ಪ್ರಥಮ ಶೈಲಪುತ್ರಿ ಪೂಜೆ ಹಾಗೂ ಇತರೆ ಪೂಜೆಗಳನ್ನು ಕೈಗೊಳ್ಳಲಾಗುತ್ತಿದ್ದು. ಈ ಕಾರ್ಯಕ್ರಮಕ್ಕೆ ಮಠಾಧೀಶರು, ಗಣ್ಯರು ಹಾಗೂ ರಾಜಕೀಯ ವ್ಯಕ್ತಿಗಳು ಆಗಮಿಸಲಿದ್ದಾರೆ.
ಅ.3 ರಂದು ಘಟಸ್ಥಾಪನೆ ಕಳಸ ಸ್ಥಾಪನೆಯನ್ನು ಶಿವಯ್ಯ ಸ್ವಾಮಿ ಆಲೂರ ಅವರಿಂದ, 4 ರಂದು ಶೈಲಪುತ್ರಿ ಪೂಜೆಯನ್ನು ಶಾಸಕ ಎಂ.ವಾಯ್ ಪಾಟೀಲ ಹಾಗೂ ಅವರ ಕುಟುಂಬದವರಿಂದ, 5 ರಂದು ಬ್ರಹ್ಮಚಾರಣೆ ಪೂಜೆ ಮಾಜಿ ಶಾಸಕ ದತ್ತಾತ್ರೆಯ ಪಾಟೀಲ ಸಿ ರೇವೂರ ಅವರಿಂದ,6 ರಂದು ಚಂದ್ರಘಂಟಾ ಪೂಜೆಯನ್ನು ಅನೀಲ ಕಳಸ್ತರ ಪರಿವಾರದಿಂದ,7 ರಂದು ಕೂಷ್ಮಾಂಡಾ ಪೂಜೆಯನ್ನು ಡಾ. ಎಸ್.ಬಿ. ಕಾಮರೆಡ್ಡಿ ಪರಿವಾರದವರಿಂದ, 8 ರಂದು ಸ್ಕಂದಮಾತಾ ಪೂಜೆಯನ್ನು ಬಸವರಾಜ ನಂದ್ಯಾಳ ಪರಿವಾರದಿಂದ, 9ರಂದು ಕ್ಯಾತ್ಯಾಯನಿ ಪೂಜೆಯನ್ನು ರಾಜು ಲೆಂಗಟಿ ಪರಿವಾರದವರಿಂದ ಮತ್ತು 10 ರಂದು ಕಾಳರಾತ್ರಿ ಪೂಜೆಯನ್ನು ಶಿವಾನಂದ ಪಾಟೀಲ ಪರಿವಾರದವರಿಂದ, 11 ರಂದು ಮಹಾಗೌರಿ ಪೂಜೆಯನ್ನು ಬೆಂಗಳೂರಿನ ಉದ್ದಿಮೆದಾರರಾದ ಅನಿಲಕುಮಾರ ಕುಟುಂಬದಿಂದ, ಕೊನೆಯದಾಗಿ 12 ರಂದು ಸಿದ್ದಿದಾತ್ರಿ ಪೂಜೆಯನ್ನು ಡಾ. ಶರಣಬಸಪ್ಪ ಆವಂಟಿ ಹಾಗೂ ಆನಂದ ಗಾರಂಪಳ್ಳಿ ಪರಿವಾರದವರಿಂದ ನೆರವೇರಿಸಲಾಗುವುದು.
ಕಾರ್ಯಕ್ರಮದ ವಿಶೇಷತೆ ಎಂದರೆ 11 ದುರ್ಗಾಷ್ಟಮಿಯಂದು ಸಾಯಂಕಾಲ 7 ಗಂಟೆಗೆ ಕನ್ಯಾ ಮುತೈದಿಯರ ಪಾದಪೂಜೆ ಮತ್ತು ದುರ್ಗಾ ದೇವಿಗೆ 108 ಮುತ್ತೈದೆಯರಿಂದ ಮಹಾ ಮಂಗಳಾರತಿ ಕಾರ್ಯಕ್ರಮ ನೆರವೇರಲಿದ್ದು ಇದರ ಸಾನಿಧ್ಯವನ್ನು ವೀರಭದ್ರ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ, ಗುರುಲಿಂಗ ಶಿವಾಚಾರ್ಯರು ಮಲಕೂಡ, ನೀಲಕಂಠ ಶಿವಾಚಾರ್ಯರು ನಿಂಬರ್ಗಾ, ಸಿದ್ದಲಿಂಗ ಶಿವಾಚಾರ್ಯರು ಅಳಂದ, ಬಸವಲಿಂಗ ಶಿವಾಚಾರ್ಯರು ಭೂಸನೂರ, ಶಿವಲಿಂಗ ದೇವರು ನಿಂಬರ್ಗಾ ವಿರಕ್ತ ಮಠ ವಹಿಸಲಿದ್ದಾರೆ. ಉದ್ಘಾಟಕರಾಗಿ ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ ಆಗಮಿಸಲಿದ್ದಾರೆ.ವಿಧಾನ ಪರಿಷತ್ತ್ ಸದಸ್ಯ ಬಿ.ಜಿ. ಪಾಟೀಲ ಮತ್ತು ಮಾಜಿ ಶಾಸಕ ಸುಭಾಷ ಗುತ್ತೇದಾರ ಹಾಜರಿರುವರು.
ಇದೇ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಕಲಬುರಗಿಯ ಪೂಜ್ಯ ಶ್ರೀ ವೇದಮೂರ್ತಿ ಲಿಂ. ಶಿವಬಸಯ್ಯ ಹಿರೇಮಠ ಪ್ರತಿಷ್ಠಾನದಿಂದ ಈ ವರ್ಷದ ಶಿವಭೂಷಣ ರತ್ನ ಪ್ರಶಸ್ತಿಯನ್ನು ಖ್ಯಾತ ಉದ್ದಿಮೆದಾರರು ಹಾಗೂ ಶಿಕ್ಷಣ ತಜ್ಞರಾದ ಬಸವರಾಜ ಭೀಮಳ್ಳಿಯವರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.