ನಾಗನಕೇರಾ ಕೆರೆ ಹಿನ್ನೀರಿನಿಂದ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಶಾಶ್ವತ ಪರಿಹಾರ : ಈಶ್ವರ್ ಖಂಡ್ರೆ
ಚಿಟಗುಪ್ಪಿ,ಸೆ 29: ನಾಗನಕೇರಾ ಗ್ರಾಮದ ಕೆರೆಯ ಹಿನ್ನೀರಿನಿಂದ ಸಂಕಷ್ಟ ಕ್ಕೊಳಗಾದ ಸುಮಾರು 20 ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ತಾಲೂಕಿನ ನಾಗನಕೇರ ಗ್ರಾಮದ ಕೆರೆ ಭರ್ತಿಯಾಗಿ ಹಿನ್ನೀರಿನಿಂದ ಮನೆಗೆ ಮಳೆ ನೀರು ನುಗ್ಗಿ ತೊಂದರೆಗೊಳಗಾದ ಕುಟುಂಬಸ್ಥರಿಗೆ ಗ್ರಾಮದ ಸರ್ಕಾರಿ ಶಾಲೆಯ ಗಂಜಿ ಕೇಂದ್ರದಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದರು.
ಗ್ರಾಮದಲ್ಲಿ ಸರ್ಕಾರಿ ಜಮೀನು ಅಥವಾ ಖಾಸಗಿ ಜಮೀನು ಮಾರಾಟಕ್ಕಿದ್ದರೆ ಅಂತಹ ಜಾಗದಲ್ಲಿ ಸುಮಾರು 20 ಮನೆಗಳನ್ನು ಶಾಶ್ವತವಾಗಿ ಕಟ್ಟಿಕೊಡಲಾಗುವುದು ಎಂದರು.
ಕೆರೆಯ ಅಕ್ಕ ಪಕ್ಕದ ಹೊಲಗಳಲ್ಲಿ ನೀರು ತುಂಬಿ ರೈತರಿಗೆ ಅಪಾರ ನಷ್ಟವಾಗಿದೆ ಕೃಷಿ ತೋಟಗಾರಿಕೆ ಮತ್ತು ಕಂದಾಯ ಇಲಾಖೆಯವರು ಜಂಟಿಯಾಗಿ ಸರ್ವೆ ನಡೆಸಿ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಕೆರೆ ಮತ್ತಿತರ ಸರ್ಕಾರಿ ಜಾಗಗಳಲ್ಲಿ ಒತ್ತುವರಿಯಾಗುವುದನ್ನು ತಡೆಯಲು ಗ್ರಾಮ ಪಂಚಾಯತ್, ತಾಲೂಕ ಪಂಚಾಯತ್ ನವರು ಹೆಚ್ಚಿನ ಮುತುವರ್ಜಿ ವಹಿಸಬೇಕು, ಒತ್ತುವರಿಯಾದರೆ ಕಠಿಣ ಕ್ರಮ ಜರುಗಿಸಿ ಎಂದು ಸೂಚಿಸಿದರು.ಬಳಿಕ ಕೆರೆ ಹಾಗೂ ನೀರು ನುಗ್ಗಿದ ಮನೆಗಳು ಹಾನಿಗೊಳಗಾದ ಹೊಲಗಳಿಗೆ ಭೇಟಿ ನೀಡಿದರು.
ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದಿರುವುದನ್ನು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದಾಗ ತಕ್ಷಣ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗೆ ಮೊಬೈಲ್ ನಲ್ಲಿ ಮಾತಾಡಿ ನಾಳೆಯಿಂದಲೇ ಬಸ್ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.
ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ,ಜಿಪಂ ಸಿ ಇ ಒ ಗಿರೀಶ್ ಬದೋಲೆ, ತಹಸೀಲ್ದಾರ್ ಮಂಜುನಾಥ ಪಾಂಚಾಳ್, ತಾಪ ಇಒ ಲಕ್ಷ್ಮಿ ಬಿರಾದಾರ್, ಡಿವಾಯ್‍ಎಸ್‍ಪಿ ಜಿ ಎಸ್ ನ್ಯಾಮಗೌಡರ್, ಗ್ರಾಮ ಪಂಚಾಯತ್ ಅಧ್ಯಕ್ಷ ಕುಂಡಲಿಕ್ ಅರ್ಕಿ, ಮುಖಂಡರಾದ ಚಂದ್ರಶೇಖರ್ ಚನಶೆಟ್ಟಿ, ಗುರುನಾಥ ರಾಜಗಿರಾ ಬಗದಲ್, ಸಂತೋಷ್ ಹಳ್ಳಿಖೇಡ್, ನೂರುದ್ದಿನ್ ಮಸ್ತಾನ್,ಸಂದೀಪ್, ರಾಜು ಪಾಂಚಾಳ್, ರವಿಸ್ವಾಮಿ ನಿರ್ಣಾ ಸೇರಿದಂತೆ ರಾಜಕೀಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.