ಕಾರ್ಮಿಕರ ಶ್ರೇಯೋಭಿವೃದ್ದಿಗೆ ವಿವಿಧ ಯೋಜನೆ ಸದ್ಬಳಕೆಗೆ ಡಿಸಿ ಕರೆ
ಕೋಲಾರ,ಅ,೬- ಕಾರ್ಮಿಕ ಸಂಘಟನೆಗಳು, ಸಾರ್ವಜನಿಕರು, ಉದ್ಯೋಗದಾತರು ಹಾಗೂ ಯೋಜನೆಗಳನ್ನು ಅನುಷನ ಮಾಡುತ್ತಿರುವ ಸಂಘಟನೆಯ ಪದಾಧಿಕಾರಿಗಳಿಗೆ ಯೋಜನೆ ಮತ್ತು ಕಾನೂನು ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆಯಿಂದ ಏರ್ಪಡಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಉದ್ಯೋಗಿಗಳ ರಾಜ್ಯ ವಿಮಾ ನಿಗಮ, ಉದ್ಯೋಗಿಗಳ ಭವಿಷನಿಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಆಡಿಟೋರಿಯಂ ಭವನದಲ್ಲಿ ಹಮ್ಮಿಕೊಂಡಿದ್ದ, ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ಅನುಷನಗೊಳಿಸಲಾಗುತ್ತಿರುವ ಯೋಜನೆ/ಕಾನೂನುಗಳ ಅರಿವು ಹಾಗೂ ಅಭಿಪ್ರಾಯ ಸಂಗ್ರಹ ಸಂಬಂಧಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ ಸರ್ಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರ ಕೌಶಲ್ಯವನ್ನು ಹೆಚ್ಚಿಸಲು ಹಲವಾರು ಕಾನೂನು ಹಾಗೂ ನಿಯಮಗಳನ್ನು ಜಾರಿಗೆ ಮಾಡಲಾಗಿದೆ. ಈ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ರೂಪಿಸಿದರೆ ಮಾತ್ರ ಜನರಲ್ಲಿ ಜಾಗೃತಿ ಮೂಡುತ್ತದೆ ಎಂದರು.
ಕರೋನ ಸಂದರ್ಭದಲ್ಲಿ ಕಾರ್ಮಿಕರು ತುಂಬಾ ಸಮಸ್ಯೆಗಳನ್ನು ಎದುರಿಸಿದ ಘಟನೆಗಳನ್ನು ನೆನೆಯುತ್ತಾ ಆ ಸಮಯದಲ್ಲಿ ಕಾರ್ಮಿಕ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಸುಮಾರು ೫ ಲಕ್ಷ ಬೇರೆ ರಾಜ್ಯದ ಉದ್ಯೋಗಿಗಳಿಗೆ ಆಹಾರ ಹಾಗೂ ತಮ್ಮ ತಮ್ಮ ಊರುಗಳಿಗೆ ಹೋಗಲು ರೈಲು ಸಂಚಾರ ಒದಗಿಸಿದ್ದೆವು ಎಂದರು. ಕಾರ್ಮಿಕರಿಗೆ ಸಂಬಳ ಕೊಡಿಸುವುದರಲ್ಲಿ ಅವರ ಹಿತರಕ್ಷಣೆ ಯನ್ನು ಕಾಪಾಡುವುದ ರಲ್ಲಿ ಕಾರ್ಮಿಕ ಅಧಿಕಾರಿಗಳು ಹಿಂಜರಿಯುವುದಿಲ್ಲ ಹಾಗೂ ಹಲವಾರು ಸ್ಕಾಲರ್‌ರ್ಶಿಪ್ ನೀಡುತ್ತಿದ್ದು, ಕಾರ್ಮಿಕ ಮಕ್ಕಳು ಕಾರ್ಮಿಕರಾಗಬಾರದು ಎಂದು ಕಿವಿ ಮಾತು ತಿಳಿಸಿದರು,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್ ಎಸ್ ಹೊಸಮನಿ ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕಾರ್ಮಿಕರಿಗೆ ೩೧ ಕಾನೂನುಗಳು ಇದ್ದರೂ ಸಹ ಅವುಗಳ ಅರಿವಿಲ್ಲದಿರುವುದು ದುರದೃಷ್ಟ ಸಂಗತಿ ಎಂದರು. ಕಾರ್ಮಿಕರಲ್ಲಿ ಎರಡು ವಿಧಗಳಿವೆ ಸಂಘಟಿತ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರು, ಸಂಘಟಿತ ಕಾರ್ಮಿಕರು ತಮಗೆ ಸಿಗಬೇಕಾದ ಸೌಲಭ್ಯಗಳಿಗೆ ಹೋರಾಡುತ್ತಾರೆ. ಆದರೆ ಅಸಂಘಟಿತ ಕಾರ್ಮಿಕರಲ್ಲಿ ಅರಿವು ಇರುವುದಿಲ್ಲ. ಅಸಂಘಟಿತ ಕಾರ್ಮಿಕರ ಮೇಲೆ ತಮ್ಮ ಮಾಲೀಕರು, ಮಧ್ಯವತಿಗಳು ದಬ್ಬಾಳಿಕೆಯನ್ನು ನಡೆಸುತ್ತಿರುತ್ತಾರೆ ಹಾಗೂ ಅವರ ಸೌಲಭ್ಯಗಳನ್ನು ದುರುಪಯೋಗಪಡಿಸುತ್ತಿದ್ದಾರೆ ಎಂದು ಹೇಳಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯಿಂದ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ, ಟೂಲ್‌ಕಿಟ್ ಸೌಲಭ್ಯ, ಹೆರಿಗೆ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ ಶೈಕ್ಷಣಿಕ ಸಹಾಯಧನ, ಅಪಘಾತ ಪರಿಹಾರ ಪ್ರಮುಖ ವೈದ್ಯಕೀಯ ಸಹಾಯಧನ, ಮದುವೆ ಸಹಾಯಧನ ಹಾಗೂ ತಾಯಿ-ಮಗು ಸಹಾಯ ಹಸ್ತ ಸೌಲಭ್ಯಗಳನ್ನು ಮತ್ತು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಿಂದ ಅಪಘಾತ ಪರಿಹಾರ ಸೌಲಭ್ಯ ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ ಸೌಲಭ್ಯಗಳು ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಅಪಘಾತ ಪರಿಹಾರ ಶೈಕ್ಷಣಿಕ ಧನ ಸಹಾಯ, ಅಪಘಾತ ಜೀವ ರಕ್ಷಕ ಕಾರ್ಯಕ್ರಮಗಳನ್ನು ಪಡೆದುಕೊಂಡು ತಮ್ಮ ಜೀವನವನ್ನು ಉತ್ತಮಪಡಿಸಿ ಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ೩-ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಸಂತೋಷ ಹಿಪ್ಪರಗಿ, ಹೊಸಕೋಟೆ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಉಪ ನಿರ್ದೇಶಕ ನರಸಿಂಹಮೂರ್ತಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಕೆ, ಕಾರ್ಮಿಕರ ಭವಿಷ್ಯನಿಧಿ ಪ್ರವರ್ತನ ಅಧಿಕಾರಿ ಮಹೇಶ್ ಬಾಬು, ಕೆಜಿಎಫ್ ಇ.ಎಸ್.ಐ ಶಾಖಾ ವ್ಯವಸ್ಥಾಪಕ ರವಿಚಂದ್ರಶೇಖರ್ ಮತ್ತು ಕಾರ್ಮಿಕ ಅಧಿಕಾರಿ ವರಲಕ್ಷ್ಮಿ .ಆರ್ ಹಾಗೂ ಕಂಪನಿಗಳು ಎಚ್. ಆರ್ ರವರು ಸೇರಿದಂತೆ ಮತ್ತಿತರರು ಉಪಸ್ಥಿತರಿದರು.