ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾದರಿಯಾಗಲಿ
ಕೋಲಾರ,ಅ,೬- ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾತ್ರವು ಸಾಭೀತಾಗಿದ್ದು ರಾಜ್ಯಪಾಲರು ತನಿಖೆಗೆ ಆದೇಶ ಕೊಟ್ಟಿದ್ದಾರೆ ಕೂಡಲೇ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇತರೆ ರಾಜಕಾರಣಿಗಳಿಗೆ ಮಾದರಿಯಾಗುವಂತೆ ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆಯತ್ತಿದೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬವು ನೇರವಾಗಿ ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಈಗಾಗಲೇ ಹೈಕೋರ್ಟ್ ಆದೇಶದ ಪ್ರಕಾರ ಮುಖ್ಯಮಂತ್ರಿ ವಿರುದ್ಧವೇ ಪ್ರಕರಣ ದಾಖಲಾಗಿದೆ ಸಂವಿಧಾನ ರಕ್ಷಕ, ಸಮಾಜವಾದಿ ಚಿಂತಕ ಎಂದು ಹೇಳಿ ಕೊಳ್ಳುವ ಸಿದ್ದರಾಮಯ್ಯ ಅ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ ಅವರು ಸಿಎಂ ಸ್ಥಾನದಲ್ಲಿ ಇದ್ದರೆ ಪಾರದರ್ಶಕವಾಗಿ ತನಿಖೆ ನಡೆಯಲು ಸಾಧ್ಯವಿಲ್ಲ ನಾಡಿನ ಜನತೆಗೆ ನ್ಯಾಯ ಸಿಗಬೇಕಾದರೆ ಮೊದಲು ರಾಜೀನಾಮೆ ಕೊಟ್ಟು ಪ್ರಕರಣದ ತನಿಖೆಗೆ ಸಹಕರಿಸಬೇಕು ಎಂದರು.
ತಮ್ಮ ಮೇಲಿನ ಆರೋಪಗಳನ್ನು ಬದಿಗೊತ್ತಿ ವಿರೋಧ ಪಕ್ಷದ ಮುಖಂಡರ ಮೇಲಿನ ಹಳೆಯ ಕೇಸ್‌ಗಳ ತನಿಖೆಯ ನೆಪದಲ್ಲಿ ಬ್ಲಾಕ್ ಮೇಲ್ ರಾಜಕಾರಣಕ್ಕೆ ಮುಂದಾಗಿರುವ ರಾಜ್ಯದ ಕಾಂಗ್ರೆಸ್ ಸರಕಾರದ ಕ್ರಮ ಖಂಡನೀಯವಾಗಿದೆ ತಮ್ಮ ಆರೋಪಗಳನ್ನು ಮುಚ್ಚಿಹಾಕಿಕೊಳ್ಳಲು ವಿನಾಕಾರಣ ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದರೂ ಕೇಂದ್ರ ಸಚಿವ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ನೇರವಾಗಿ ಎದುರಿಸಲು ಸಾಧ್ಯವಾಗದೇ ತಮ್ಮ ಸಚಿವ ಸಂಪುಟದ ಸಚಿವರ ಮೂಲಕ ರಾಜ್ಯದ ಜನತೆಗೆ ತಪ್ಪು ಸಂದೇಶವನ್ನು ಕೊಟ್ಟು ಜನತೆಯನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ ಇಂತಹ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಸರಕಾರಕ್ಕೆ ಶೋಭೆ ತರುವುದಿಲ್ಲ ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ಒಂದೊಂದು ಹಗರಣಗಳನ್ನು ಬಯಲಿಗೆ ಎಳೆದು ರಾಜ್ಯ ಸರಕಾರದ ಜನತೆ ಮುಂದೆ ಇಟ್ಟಿದ್ದಾರೆ ಇದಕ್ಕೆ ಉತ್ತರ ಕೊಡುವ ನೆಪದಲ್ಲಿ ಕಾಂಗ್ರೆಸ್ ಸರಕಾರವೇ ಬೀದಿಗೆ ಬಿದ್ದಾಂತಾಗಿದೆ ಎಂದು ದೂರಿದರು.
ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ನಾಡದೇವತೆಯ ಮುಂದೆಯೇ ಸಿದ್ದರಾಮಯ್ಯ ಅವರ ಅಧಿಕಾರದ ದಾಹವನ್ನು ಪ್ರದರ್ಶಿಸಿದ್ದಾರೆ ಅವರಿಗೆ ತಾಯಿ ಚಾಮುಂಡೇಶ್ವರಿಯ ಶಾಪ ತಟ್ಟಲಿದೆ ಅದೇ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಶಾಸಕ ಜಿ.ಟಿ ದೇವೇಗೌಡರು ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದ್ದು, ಅದು ಅವರ ವೈಯಕ್ತಿಕ ವಿಚಾರವಾಗಿದ್ದು ಜಿ.ಟಿ ದೇವೇಗೌಡರ ಹೇಳಿಕೆಗಳು ಜೆಡಿಎಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ನಮ್ಮ ಪಕ್ಷದ ನಿಲುವು ಒಂದೇ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಶೂನ್ಯವಾಗಿದೆ, ಜನತೆ ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹ ಮರೆತು ಹೋಗಿದ್ದಾರೆ.ಕಾಂಗ್ರೆಸ್ ಜನಪ್ರತಿನಿಧಿಗಳು ಅಧಿಕಾರಿಗಳ ವರ್ಗಾವಣೆ ಹಾಗೂ ಗುತ್ತಿಗೆ ಕಾಮಗಾರಿಗಳ ಧಂದೆಯಲ್ಲಿ ತೊಡಗಿದ್ದರಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಣಕನಹಳ್ಳಿ ನಟರಾಜ್ ಆರೋಪಿಸಿದರು.