ಸಂಗೀತಕ್ಕೆ ಸಾವಿಲ್ಲ – ಬಿ.ಆರ್.ಪಿ ಶಂಕರಪ್ಪ
ಕೋಲಾರ,ಅ.6: ಗುರುಕುಲದಿಂದಲೂ ಸಂಗೀತ ಒಂದು ಕಲೆಯಾಗಿದ್ದು, ಇದನ್ನು ರಾಜ ಮಹಾರಾಜರು ಕೂಡು ಇಂಪಾಗಿ ಕೇಳುವುದರ ಮೂಲಕ ತಮ್ಮ ಮನಸ್ಸನ್ನು ಸಂತೋಷಪಡಿಸಿಕೊಳ್ಳುತ್ತಿದ್ದರು ಮತ್ತು ಕಲೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು ಎಂದು ಬಿ.ಆರ್.ಪಿ.ಶಂಕರಪ್ಪ ಹೇಳಿದರು.
ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘ, ಮಾಗೇರಿ, ಕೋಲಾರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಬೇತಮಂಗಲ ಭವಾನಿ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ೨೦೨೪-೨೫ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಕೋಲಾರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕ ಜೀವನದಲ್ಲಿ ಪ್ರತಿಯೊಬ್ಬ ನಾಗರೀಕನು ದಿನವೆಲ್ಲ ದುಡಿದು ಸಂಪಾದನೆ ಮಾಡಿ ತನ್ನ ಸಂಸಾರವನ್ನು ನಿಭಾಯಿಸಿಕೊಂಡು ಬರುತ್ತಿದ್ದಾನೆ. ಇದರ ಮಧ್ಯದಲ್ಲಿ ಅನೇಕ ಮೂಲ ಕಲೆಗಳನ್ನು ಅಭ್ಯಾಸ ಮಾಡಿಕೊಂಡು ಅವುಗಳನ್ನು ಪ್ರದರ್ಶಿಸಿಕೊಂಡು ಬರುವುದು ಬಹಳ ಉತ್ತಮ ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಜಾನಪದ ಎಂದರೆ ಜನರೇ ಪದಗಳನ್ನು ಜೋಡಿಸಿ ಹಾಡುವುದಕ್ಕೆ ಜನಪದ ಎಂದು ಕರೆಯುತ್ತೇವೆ. ಇದರಿಂದ ನಮ್ಮಲ್ಲಿ ಪ್ರೀತಿ ವಾತ್ಸಲ್ಯ ಬೆಳೆಯುತ್ತದೆ. ನಮ್ಮ ಪೂರ್ವಜನರು ಸಾಯಂಕಾಲ ಗ್ರಾಮದ ದೇವಸ್ಥಾನಗಳಲ್ಲಿ ಹಬ್ಬ ಹರಿದಿನ ಮತ್ತು ಸಂಜೆ ವೇಳೆ ಒಂದು ಕಡೇ ಸೇರಿ ದೇವರ ಭಜನೆ, ಕೀರ್ತನೆ, ತತ್ವ ಪದಗಳು ಹೀಗೆ ಹತ್ತಾರು ಕಲೆಗಳ ಹಾಡುಗಳನ್ನು ಹಾಡುವುದರ ಮೂಲಕ ದೇವರ ಸೇವೆಯಲ್ಲಿ ಮಗ್ನರಾಗಿದ್ದರು.
ಆದರೆ ಕಾಲ ಕಳೆಯುತ್ತಿದ್ದಂತ ಅಂತಹ ಭಕ್ತಿ ಮನಸ್ಸುಗಳು ದೂರವಾಗಿ ಮತ್ತು ದೇಶಿಯ ಸಂಸ್ಕೃತಿಗಳನ್ನು ಮರೆಯುತ್ತಿರುವುದು ಬಹಳ ದುಃಖದ ಸಂಗತಿಯಾಗಿದೆ ಎಂದರು. ಆದರೆ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲೆ ಮತ್ತು ಕಲಾವಿಧರನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವುದು ನಿಜಕ್ಕೂ ಸಹ ಇಲಾಖೆಗೆ ಧನ್ಯವಾದಗಳನ್ನು ಸಲ್ಲಸುತ್ತೇವೆ ಎಂದು ಹೇಳಿದರು. ಅಷ್ಟೆ ಅಲ್ಲದೆ ಎಲ್ಲಾ ಭಾಷೆಗಳಿಗಿಂತ ಕನ್ನಡ ಭಾಷೆಗೆ ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿದೆ. ಅದರಲ್ಲಿ ಕನ್ನಡ ಸಾಹಿತ್ಯಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಸಹ ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಎ ಗ್ರೇಡ್ ಆಕಾಶವಾಣಿ ಕಲಾವಿದ ಬೇತಮಂಗಲ ನಾದಸ್ವರ ರಮೇಶ್ ರವರು ಮಾತನಾಡುತ್ತಾ ಆಧುನಿಕ ಯುಗದಲ್ಲಿ ಮೂಲೆ ಗುಂಪಾಗಿರುವ ಕಲೆಗಳಿಗೆ ಮರು ಜೀವ ಕೊಟ್ಟು ಬೆಳೆಸುವುದು ಕಲಾವಿಧರ ಹಾಗೂ ಇಲಾಖೆ ಒಂದು ಹೊಣೆಗಾರಿಕೆಯಾಗಿದೆ. ಆದುದ್ದರಿಂದ ಇಲಾಖೆಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭವಾನಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಸತ್ಯನಾರಾಯಣ, ಬಿ.ಆರ್.ಪಿ.ಕೃಷ್ಣಮೂರ್ತಿ, ಶಿಕ್ಷಕರ ಸಂಘದ ಸದಸ್ಯ ಆನಂದ್, ಆಡಳಿತ ಮಂಡಳಿಯ ಮಂಜುನಾಥ್, ಸಂಗೀತ ಶಿಕ್ಷಕ ನಾರಾಯಣಸ್ವಾಮಿ, ಗಾಯಕ ಮಾಗೇರಿ ವೆಂಕಟೇಶ್, ದೇವೇರಹಳ್ಳಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಮುನಿಯಪ್ಪ ಸ್ವಾಗತಿಸಿ, ವಂದಿಸಿದರು.