ರಾಜ್ಯದ ಪಾಲಿಟೆಕ್ನಿಕ್‍ಗಳಿಗೆ ಹೊಸ ಸ್ಪರ್ಶ
ಸಂಜೆವಾಣಿ ನ್ಯೂಸ್
ಮೈಸೂರು: ಆ.01:- ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಸೇರಿದಂತೆ ರಾಜ್ಯದ ಎಲ್ಲಾ ಪಾಲಿಟಿಕ್ನಿಕ್‍ಗಳ ಸ್ಥಿತಿಗತಿ ವರದಿ ಪಡೆದುಕೊಳ್ಳುತ್ತಿದ್ದು, ವರದಿ ಬಂದ ನಂತರ ಹೊಸ ಸ್ಪರ್ಶ ನೀಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಮೈಸೂರಿನ ಅಶೋಕ ರಸ್ತೆಯಲ್ಲಿರುವ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್‍ನ 70ನೇ ವರ್ಷದ ಅಮೃತ ಮಹೋತ್ಸವ ವರ್ಷಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ಯಾವುದೇ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿದಾಗ ಎಲ್ಲಾ ರೀತಿಯ ಪೆÇ್ರೀತ್ಸಾಹ ನೀಡಿದ್ದಾರೆ. ಅವರು ತಿಳಿಸಿದಂತೆ ಮಹಾರಾಜರು ಕಟ್ಟಿಸಿರುವ ಮಹಾರಾಣಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಪರಿಶೀಲಿಸಿ, ನಂತರ ಉತನ್ನತೀಕರಣಗೊಳಿಸಲು ಮುಂದಾಗಿದ್ದೇವೆ ಎಂದರು.
ಶೀಘ್ರದಲ್ಲೇ ಶಂಕುಸ್ಥಾಪನೆ: ಮಹಾರಾಣಿ ಕಾಲೇಜು ಪಾರಂಪರಿಕ ಕಟ್ಟಡವಾದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಲು ಪಾರಂಪರಿಕ ತಜ್ಞರ ಸಲಹೆ ತೆಗೆದುಕೊಂಡಿದ್ದು, 55 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುತ್ತಿದೆ. 5 ಕೋಟಿ ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿಗಳು ಸದ್ಯದಲ್ಲಿಯೇ ಶಂಕುಸ್ಥಾಪನೆ ಮಾಡಲಿದ್ದಾರೆ. ಬಾಕಿ 50 ಕೋಟಿ ವೆಚ್ಚದಲ್ಲಿ ಎರಡು ಸಾವಿರ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಲಯ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಸಿಪಿಸಿ ಕಾಲೇಜಿಗೂ ವಿಸ್ತೃತ 65 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸ್ಪರ್ಶ ನೀಡಲು ಚಿಂತಿಸಿದ್ದು, ಈಗಾಗಲೇ ಸಿವಿಲ್ ಇಂಜಿನಿಯರ್ ಕಳುಹಿಸಿ ವರದಿ ಸಿದ್ದಪಡಿಸಲಾಗಿದೆ. ಮತ್ತೊಂದೆಡೆ ಕಾಲೇಜಿನಲ್ಲಿ ಎಐ ಮತ್ತು ಸೈಬರ್ ಕುರಿತ ಎರಡು ಹೊಸ ಕೋರ್ಸ್ ಆರಂಭಿಸಲು ಚಿಂತಿಸಿರುವುದರಿಂದ ಕಾಲೇಜಿಗೆ ನೂತನ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಹೀಗೆ ರಾಜ್ಯದ 106 ಪಾಲಿಟೆಕ್ನಿಕ್‍ಗಳ ವರದಿ ತೆಗೆದುಕೊಳ್ಳುತ್ತಿದ್ದೇನೆ. ಅವುಗಳನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ. ಚಿಂತಾಮಣಿಯಲ್ಲಿ ನಮ್ಮ ತಾತಾ ಅವರು ಕಟ್ಟಿಸಿರುವ ಪಾಲಿಟೆಕ್ನಿಕ್ 75 ವರ್ಷ ಪೂರೈಸಿದ್ದು, ನನ್ನ ಕ್ಷೇತ್ರದಲ್ಲಿರುವ ಈ ಪಾಲಿಟೆಕ್ನಿಕ್‍ಗೆ ಕಾಯಕಲ್ಪ ಮಾಡಬೇಕೆಂಬ ಮಹಾದಾಸೆ ಇದೆ ಎಂದರು.
ಶಾಸಕ ತನ್ವೀರ್‍ಸೇಠ್ ಮಾತನಾಡಿ, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹಳೆಯ ಯಂತ್ರಗಳಿದ್ದು, ಹೊಸ ಕಾರ್ಯಕ್ರಮಗಳನ್ನು ರೂಪಿಸಿ ಬೇಡಿಕೆಗಳಿಗೆ ಅನುಗುಣಗಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಒಂದು ಅಕ್ಷರ ಓದಿಲ್ಲದೇ ಇರುವವರು ಶಿಕ್ಷಣ ನೀತಿಗಳ ಬಗ್ಗೆ ಮಾತನಾಡುತ್ತಾರೆ. ತಾಂತ್ರಿಕ ತಂಡ ರಚಿಸಿ ಅಗತ್ಯ ಸೂಚನೆ ಸಲಹೆಗಳನ್ನು ಪಡೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಪಿಸಿ ಕಾಲೇಜು ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ಸಿ.ಪೆರುಮಾಳ್ ಚೆಟ್ಟಿ ಅವರ ಪುತ್ರ ಪಿ.ಧರ್ಮರಾಜ್ ಚೆಟ್ಟಿ ಮತ್ತು ಮೊಮ್ಮಗಳಾದ ಜೆ.ಲೋಕೇಶ್ವರಿ ಅವರನ್ನು ಅಭಿನಂದಿಸಲಾಯಿತು. ಈ ವೇಳೆ ತಾಂತ್ರಿಕ ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಎಂ.ಸುರೇಶ್‍ಕುಮಾರ್, ಪ್ರಾಂಶುಪಾಲ ಎಂ.ಪ್ರಕಾಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎನ್.ಎಸ್.ಬಸವರಾಜು ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.