ಸಿಂಡಿಕೇಟ್ ಸದಸ್ಯರಿಗೆ ವಿವಿ ಕಾಯ್ದೆಯ ಅರಿವಿರಲಿ
ಸಂಜೆವಾಣಿ ನ್ಯೂಸ್
ಮೈಸೂರು: ಆ.01:- ಸಿಂಡಿಕೇಟ್ ಸದಸ್ಯರಿಗೆ ವಿಶ್ವವಿದ್ಯಾಲಯ ಕಾಯ್ದೆ ಬಗ್ಗೆ ಅರಿವಿರಬೇಕು. ಕಾನೂನು ಗೊತ್ತಿದ್ದರೆ ಪಿಂಚಣಿದಾರರು ಸೇರಿದಂತೆ ವಿಶ್ವವಿದ್ಯಾಲಯದ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪೆÇ್ರ.ಎಸ್.ಆರ್.ನಿರಂಜನ ಅಭಿಪ್ರಾಯಪಟ್ಟರು.
ನಗರದ ಕ್ರಾಫರ್ಡ್ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯ ನಿವೃತ್ತ ಉದ್ಯೋಗಿಗಳ ಒಕ್ಕೂಟದ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯದ ಸಿಂಡಿಕೇಟ್, ಶೈಕ್ಷಣಿಕ ಮಂಡಳಿಯ ಶಕ್ತಿ ಹಾಗೂ ಅಧಿಕಾರದ ಬಗ್ಗೆ ಸದಸ್ಯರಿಗೆ ತಿಳಿವಳಿಕೆ ಕಡಿಮೆಯಿದೆ. ಈ ಬಗ್ಗೆ ಪರಿಚಯಿಸಲು ಉನ್ನತ ಶಿಕ್ಷಣ ಪರಿಷತ್ತಿನಿಂದ ರಾಜ್ಯದ ಎಲ್ಲ 32 ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಿಗೆ ಕಾರ್ಯಾಗಾರ ಮಾಡಲಾಗುವುದು. ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯಗಳ ಸಿಂಡಿಕೇಟ್‍ಗೆ ನಾಮನಿರ್ದೇಶಿತ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಅದು ಮುಗಿದ ನಂತರ ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು.
ಪಿಂಚಣಿದಾರರು ವಿಶ್ವವಿದ್ಯಾಲಯದ ಬೆಳವಣಿಗೆಗೆ ಸದಾ ಸಲಹೆಯನ್ನು ಶೈಕ್ಷಣಿಕ ಮಂಡಳಿ, ಸಿಂಡಿಕೇಟ್‍ಗೆ ನೀಡಬೇಕು. ನಿವೃತ್ತರಾದ ಮೇಲೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಿವೃತ್ತ ಉದ್ಯೋಗಿಗಳ ಒಕ್ಕೂಟ ಆರಂಭಿಸಿರುವುದು, ಸಮಸ್ಯೆಗಳ ಬಗಹರಿಸಲು ನೆರವಾಗಲಿದೆ ಎಂದು ತಿಳಿಸಿದರು.
ಸರ್ಕಾರ ನಿವೃತ್ತರ ಕಡೆ ನೋಡುವುದಿಲ್ಲ. ಸರ್ಕಾರ ಪಿಂಚಣಿ ಸಮಸ್ಯೆ ಬಗೆಹರಿಸುತ್ತಿಲ್ಲವೆಂಬ ಆರೋಪವಿದೆ. ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ನಿವೃತ್ತ ಉದ್ಯೋಗಿಗಳಿಗೆ ಸಕಾಲದಲ್ಲಿ ಪಿಂಚಣಿ ಬಿಡುಗಡೆಯಾಗುತ್ತಿಲ್ಲ. ಆದರೆ, ಮೈಸೂರು ವಿಶ್ವವಿದ್ಯಾಲಯ ಹೊರತಾಗಿದೆ. ಪಿಂಚಣಿದಾರರ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ನೂರು ವರ್ಷದ ಇತಿಹಾಸವಿರುವ ವಿಶ್ವವಿದ್ಯಾಲಯದ ಶ್ರೇಯೋಭಿವೃದ್ಧಿಗೆ ನಿವೃತ್ತರೂ ಶ್ರಮಿಸಬೇಕು ಎಂದು ಕೋರಿದರು.
ಒಕ್ಕೂಟ ನಿಯಮಾವಳಿ ರಚಿಸಿಕೊಳ್ಳಬೇಕು. ಪ್ರಸ್ತಾವನೆಯಂತೆ ಕಾರ್ಯಾಚರಿಸಬೇಕು. ಅದರಿಂದ ಸಂಘದಲ್ಲಿ ಶಿಸ್ತು ಮೂಡುತ್ತದೆ. ಪಿಂಚಣಿದಾರರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಲಾಗುವುದು. ಎಚ್‍ಆರ್‍ಎಂಎಸ್ ಆನ್‍ಲೈನ್ ಸೇವೆಯನ್ನು ಬೋಧಕೇತರ ಸಿಬ್ಬಂದಿಗೂ ವಿಸ್ತರಿಸುವ ಪ್ರಯತ್ನ ನಡೆದಿದೆ ಎಂದರು.
ಕುಲಸಚಿವೆ ವಿ.ಆರ್.ಶೈಲಜಾ, ಸಿಂಡಿಕೇಟ್ ಸದಸ್ಯರಾದ ಮಹದೇಶ್, ಜೆ.ಶಿಲ್ಪಾ, ಒಕ್ಕೂಟದ ಅಧ್ಯಕ್ಷ ಪೆÇ್ರ.ಕೆ.ಮಹದೇವ್, ಪೆÇ್ರ.ಕಾಳಚನ್ನೇಗೌಡ, ಕಾರ್ಯದರ್ಶಿ ಕೃಷ್ಣಮಲ್ಲೇಗೌಡ ಹಾಜರಿದ್ದರು.