ಮೈಸೂರು ವಾರಿಯರ್ಸ್ ತರಬೇತಿಗೆ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು: ಆ.01:- ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆಯುವ ಮೂಲಕ ಮಹಾರಾಜ ಟ್ರೋಫಿ ಪಂದ್ಯಾವಳಿಯ ತರಬೇತಿಗೆ ಚಾಲನೆ ನೀಡಲಾಯಿತು.
ಮೈಸೂರು ವಾರಿಯರ್ಸ್‍ನ ಮಾಲೀಕ ಮತ್ತು ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗಾ, ಮೈಸೂರು ವಾರಿಯರ್ಸ್ ತಂಡದ ಕರುಣ್ ನಾಯರ್, ಸುಚಿತ್.ಜೆ, ಗೌತಮ್.ಕೆ, ಮನೋಜ್ ಭಾಂಡಗೆ, ಪ್ರಸಿದ್ಧ್ ಕೃಷ್ಣ, ಸಿ.ಎ.ಕಾರ್ತಿಕ್, ವೆಂಕಟೇಶ್.ಎಂ, ವಿದ್ಯಾಧರ್ ಪಾಟೀಲ್ ಮತ್ತು ಧನುಷ್ ಗೌಡ ಸೇರಿದಂತೆ ತಂಡದ 13 ಆಟಗಾರು ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದು ಮಹಾರಾಜ ಟ್ರೋಫಿ ಪಂದ್ಯಾವಳಿಗಾಗಿ ತರಬೇತಿಗೆ ಚಾಲನೆ ನೀಡಿದರು.
ದೇಗುಲದಲ್ಲಿ 6 ಅಡಿ ಎತ್ತರದ ಅಖಂಡ ಜ್ಯೋತಿಯನ್ನು ಬೆಳಗಿಸಿ ದೇವಿಯ ಆಶೀರ್ವಾದ ಕೋರಲಾಯಿತು. ಜತೆಗೆ ಮಾರ್ಗದರ್ಶನ ನೀಡಲು ಮತ್ತು ತಂಡದ ಗೆಲುವಿಗೆ ಸಹಾಯ ಮಾಡಲು ತಂಡದವರು ದೇವಿಯನ್ನು ಕೋರಿಕೊಂಡರು.
ಚಾಮುಂಡೇಶ್ವರಿ ದೇಗುಲ ಮೈಸೂರಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಏನಾದರೂ ಮಹತ್ವದ ಕಾರ್ಯಗಳಿಗೆ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆಯುವುದು ಪ್ರತೀತಿಯಾಗಿದೆ. 2024ರ ಆ.15ರಿಂದ ಸೆ.1ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿಗಾಗಿ ಮೈಸೂರು ವಾರಿಯರ್ಸ್ ತಂಡ ಈ ಮೂಲಕ ಸಿದ್ಧತೆ ಆರಂಭಿಸಿದೆ.