ವಯನಾಡಿಗೆ ಮೈಸೂರಿನಿಂದ ವೈದ್ಯರ ತಂಡ
ಸಂಜೆವಾಣಿ ನ್ಯೂಸ್
ಮೈಸೂರು: ಆ.01:- ಕೇರಳದ ವಯನಾಡಿನಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಜನರನ್ನು ರಕ್ಷಿಸಲು, ಮತ್ತು ಜನರ ಆರೋಗ್ಯ ತಪಾಸಣೆ ಮಾಡಲು ಜಿಲ್ಲಾಆಡಳಿತದ ವತಿಯಿಂದ, ತಜ್ಞ ವೈದ್ಯರು, ಮತ್ತು ತಂಡವನ್ನು ಔಷಧಿಗಳೊಂದಿಗೆ ನಿಯೋಜನೆ ಮಾಡಲಾಗಿದೆ. ಈ ತಂಡವನ್ನು ಕರ್ನಾಟಕ ಮತ್ತು ಕೇರಳ ಗಡಿ ಭಾಗವಾದ ಬಾವಲಿ ಚೆಕ್ ಪೆÇೀಸ್ಟ್‍ನಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು, ತಹಶೀಲ್ದಾರ್ ಶ್ರೀನಿವಾಸ್, ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ತಜ್ಞ ವೈದ್ಯ ಡಾ.ಶ್ರೀನಿವಾಸ್, ಡಾ.ನಾಗೇಶ್ ರಾವ್, ಡಾ.ಶೇಷಾದ್ರಿ, ಹಿರಿಯ ಔಷಧ ವಿತರಣಾಧಿಕಾರಿ ಉಮೇಶ್ ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಹುಣಸೂರು ಉಪ ವಿಭಾಗಾಧಿಕಾರಿ ವೆಂಕಟರಾಜು ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ನುರಿತ ತಜ್ಞರನ್ನು ನಿಯೋಜನೆ ಮಾಡಿ ವಯನಾಡಿಗೆ ಕಳಿಸಿ ಕೊಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲೂ ಸಹ ಅಗತ್ಯ ಔಷಧಿಗಳೊಂದಿಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಮಾತನಾಡಿ, ನುರಿತ ತಜ್ಞ ವೈದ್ಯರನ್ನು ವಯನಾಡಿಗೆ ಜಿಲಾಡಳಿತದ ವತಿಯಿಂದ ಕಳಿಸುತ್ತಿದ್ದೇವೆ. ಜತೆಗೆ ತಾಲೂಕಿನ ದೊಡ್ಡ ಬೈರನಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ತುರ್ತು ವಾಹನವನ್ನು, ನಿಯೋಜನೆ ಮಾಡಿಕೊಂಡಿದ್ದೇವೆ. ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಐದು ತುರ್ತು ವಾಹನ ಮತ್ತು 10 ಬೆಡ್‍ಗಳನ್ನೂ ಸಿದ್ದಪಡಿಸಿಕೊಂಡಿದ್ದೇವೆ. ಮುಂಜಾಗ್ರತೆ ಕ್ರಮವಾಗಿ ಅಗತ್ಯ ಔಷಧಿಗಳನ್ನು ಸಹ ಇಟ್ಟುಕೊಳಲಾಗಿದೆ ಎಂದು ತಿಳಿಸಿದರು.
ಡಾ.ವರ್ಷ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ, ರವಿರಾಜ್, ಆರ್‍ಐ ಗೌಸ್, ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು, ಇನ್ನಿತರರು ಹಾಜರಿದ್ದರು.