ರೈತರು ವೈಜ್ಞಾನಿಕ ಪದ್ದತಿಯಲ್ಲಿ ಬೇಸಾಯ ಮಾಡಿ: ಅಶೋಕ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.01: ಅತಿಯಾದ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಬಳಕೆಯಿಂದಾಗಿ ಭೂಮಿಯ ಫಲವತ್ತತೆ ನಾಶವಾಗಿ ಭೂಮಿಯು ಬಂಜರಾಗಿ ಫಸಲಿನ ಇಳುವರಿಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ರೈತ ಭಾಂದವರು ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಿ ಮಣ್ಣಿನ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮನವಿ ಮಾಡಿದರು.
ಅವರು ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಸಭಾಂಗಣದಲ್ಲಿ 24-25ನೇ ಸಾಲಿನ ಸ್ಸಯ ಸಂರಕ್ಷಣಾ(ರಾಜ್ಯ ವಲಯ) ಯೋಜನೆಯಡಿ ಆಯೋಜಿಸಿದ್ದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರು, ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಓ ಗಳು ಹಾಗೂ ಪ್ರಗತಿಪರ ರೈತ ಭಾಂದವರೊಂದಿಗೆ ಯಶಸ್ವಿ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರೈತಬಾಂಧವರು ಯಶಸ್ವಿ ಬೇಸಾಯ ನಡೆಸಲು ಮಣ್ಣಿನ ಫಲವತ್ತತೆಯು ಬಹಳ ಮುಖ್ಯವಾಗಿದೆ. ರಸಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರದೊಂದಿಗೆ ಜೈವಿಕ ಗೊಬ್ಬರವನ್ನು ಬಳಕೆ ಮಾಡಿಕೊಂಡು ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ ಬೇಸಾಯ ಮಾಡಿದರೆ ಖಂಡಿತವಾಗಿಯೂ ಹೆಚ್ಚಿನ ಇಳುವರಿಯನ್ನು ಪಡೆದುಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ. ಬೆಳೆಗಳಿಗೆ ಉಪಯುಕ್ತವಾದ ಸೂಕ್ಷ್ಮಾಣು ಜೀವಿಗಳನ್ನು ಒಳಗೊಂಡ ಜೈವಿಕ ಗೊಬ್ಬರಗಳ ಬಳಕೆಯಿಂದಾಗಿ ಭೂಮಿಯ ಫಲವತ್ತತೆಯು ಹೆಚ್ಚಾಗುವ ಜೊತೆಗೆ ಹೆಚ್ಚಿನ ಇಳುವರಿ ಯನ್ನು ಪಡೆಯಲು ಸಾಧ್ಯವಿದೆ. ಈ ದಿಕ್ಕಿನಲ್ಲಿ ತಾಲೂಕಿನ ರಸಗೊಬ್ಬರ, ಬಿತ್ತನೆ ಬೀಜ, ಹಾಗೂ ಕ್ರಿಮಿನಾಶಕಗಳ ಮಾರಾಟಗಾರರು ರೈತ ಬಾಂಧವರಿಗೆ ಅರಿವಿನ ಜಾಗೃತಿ ಮೂಡಿಸಿ ರಸ ಗೊಬ್ಬರಗಳ ಜೊತೆಗೆ ಬೋರಾನ್, ರಂಜಕ ಮತ್ತು ಪೆÇಟ್ಯಾಷ್ ಜೊತೆಗೆ ಲಘು ಪೆÇೀಷಕಾಂಶಗಳನ್ನು ಒಳಗೊಂಡಿರುವ ಸಂಯುಕ್ತ ರಸಗೊಬ್ಬರಗಳನ್ನು ಬಳಕೆ ಮಾಡಿಕೊಂಡು ಬೇಸಾಯ ಮಾಡಲು ಮನವೊಲಿಸಬೇಕು ಎಂದು ವಿ.ಎಸ್.ಅಶೋಕ್ ಸಲಹೆ ನೀಡಿದರು.
ಭೂಮಿಯ ರಂಜಕಾಂಶದ ಕೊರತೆಯಿಂದಾಗಿ ನಾವು ಸೇವಿಸುವ ಆಹಾರ ಪದಾರ್ಥದಲ್ಲಿಯೂ ಪೌಷ್ಟಿಕಾಂಶ ಮತ್ತು ಗುಣಮಟ್ಟದ ಕೊರತೆ ಉಂಟಾಗಿ ಮಧುಮೇಹದಂತ ಖಾಯಿಲೆಗೆ ಒಳಗಾಗಿ ಬಳಲುತ್ತಿದ್ದೇವೆ. ನಾವು ಸೇವಿಸುವ ಆಹಾರ ಪದಾರ್ಥಗಳು ಪೌಷ್ಟಿಕಾಂಶಗಳನ್ನು ಹೆಚ್ಚಾಗಿ ಒಳಗೊಂಡು ಆರೋಗ್ಯ ಸಂವರ್ಧನೆ ಮಾಡುವ ಬದಲಿಗೆ ವಿಷವಾಗಿ ಮಾರ್ಪಟ್ಟು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಆದ್ದರಿಂದ ರೈತ ಬಾಂಧವರು ಹೆಚ್ಚಿನ ಇಳುವರಿಯ ಆಸೆಗಾಗಿ ಅಧಿಕವಾಗಿ ರಸ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಬಳಕೆ ಮಾಡಿ ಬೇಸಾಯ ಮಾಡದೆ ಭೂಮಿತಾಯಿಯನ್ನು ನಂಬಿಕೊಂಡು ಶ್ರದ್ಧಾ ಭಕ್ತಿಯಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡಿದರೆ ಸಾಕು ಭೂಮಿ ತಾಯಿಯು ಎಂದೆಂದಿಗೂ ನಮ್ಮ ಕೈಯ್ಯನ್ನು ಬಿಡುವುದಿಲ್ಲ ಎಂಬ ಸತ್ಯವನ್ನು ಅರಿಯಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪಾಂಡವಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕಿ ಮಮತಾಗವಿಗೌಡ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಂತೋಷ್‍ಕುಮಾರ್, ಕೃಷಿ ಅಧಿಕಾರಿ ಶ್ರೀಧರ್, ಸೇರಿದಂತೆ ಹಲವರಿದ್ದರು.