ಕೇರಳ ಗುಡ್ಡ ಕುಸಿತ ಪ್ರಕರಣ: ಸಂಬಂಧಿಕರ ಮನೆಗೆ ಶಾಸಕ ಮಂಜು ಭೇಟಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.01: ಕೇರಳದ ವೈನಾಡು ಗುಡ್ಡಕುಸಿತ ಘಟನೆಯಲ್ಲಿ ಮೃತಪಟ್ಟ ತಾಲೂಕಿನ ಕತ್ತರಘಟ್ಟ ಗ್ರಾಮದ ಸಂಬಂಧಿಕರ ಮನೆಗೆ ಶಾಸಕ ಹೆಚ್.ಟಿ.ಮಂಜು ಭೇಟಿ ನೀಡಿ ಸಾಂತ್ವಾನ ಹೇಳಿದರು.
ತಾಲೂಕಿನ ಹರಿಹರಪುರ ಗ್ರಾಮ ಪಂಚಾಯತಿಯ ಮಾಜಿ ಸದಸ್ಯೆ ಕತ್ತರಘಟ್ಟದ ಕುಳ್ಳಮ್ಮ ಮತ್ತು ಜಗದೀಶ್ ಅವರ ಪುತ್ರಿ ಝಾನ್ಸಿರಾಣಿ ಅವರ ಕುಟುಂಬ ಕೇರಳದ ವೈನಾಡಿನ ಮುಂಡಕೈ ಗ್ರಾಮದಲ್ಲಿ ಹಲವು ದಶಕಗಳಿಂದ ವಾಸವಾಗಿತ್ತು. ಕಳೆದ ಸೋಮುವಾರ ನಡುರಾತ್ರಿ ಸಮಯದಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ಝಾನ್ಸಿರಾಣಿ ಅವರ ಅತ್ತೆ ಲೀಲಾವತಿ ಹಾಗೂ ಆಕೆಯ ಎರಡೂವರೆ ವರ್ಷದ ಪುಟ್ಟ ಮಗು ನಿಹಾಲ್ ದುರ್ಮರಣ ಹೊಂದಿದ್ದರೆ ಝಾನ್ಸಿ ಅವರ ಪತಿ ಅನಿಲ್ ಕುಮಾರ್, ಮಾವ ದೇವರಾಜು ಗಂಭೀರವಾಗಿ ಗಾಯಗೊಂಡಿದ್ದಾರೆ. ಝಾನ್ಸಿರಾಣಿ ಅವರ ಕೈಕಾಲುಗಳಿಗೆ ಪೆಟ್ಟು ಬಿದ್ದಿದ್ದು ಕುಟುಂಬ ಕೇರಳದಲ್ಲಿ ಸಂಕಷ್ಠಕ್ಕೆ ಸಿಲುಕಿದೆ. ಝಾನ್ಸಿ ಅವರ ಪತಿ ಅನಿಲ್ ಕುಮಾರ್ ಸೌಧಿಯಲ್ಲಿ ಉದ್ಯೋಗಿಯಾಗಿದ್ದು ಪತ್ನಿ ಹಾಗೂ ಮಕ್ಕಳನ್ನು ಸೌಧಿಗೆ ಕರೆದುಕೊಂಡು ಹೋಗಲು ಸಿದ್ದತೆ ನಡೆಸಿದ್ದು ಅದಕ್ಕಾಗಿಯೇ ಇತ್ತೀಚೆಗೆ ರಜೆಯ ಮೇಲೆ ಕೇರಳದ ಮುಂಡಕೈಗೆ ಆಗಮಿಸಿದ್ದರೆನ್ನಲಾಗಿದೆ. ಸೌಧಿಗೆ ಹೋಗುವ ಮುನ್ನ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿರುವ ಅತ್ತೆಯ ಮನೆಗೆ ಬಂದು ಹೋಗಲು ಸಿದ್ದತೆ ನಡೆಸಿದ್ದರು. ಆದರೆ ಅತ್ತೆಯ ಮನೆಗೆ ಬರುವ ಮುನ್ನವೇ ಅವರ ಕುಟುಂಬ ದುರಂತಕ್ಕೆ ಒಳಗಾಗಿದೆ. ಬೀಗತಿ ಲೀಲಾವತಿ ಹಾಗೂ ಮೊಮ್ಮಗ ನಿಹಾಲ್‍ನನ್ನು ಕಳೆದುಕೊಂಡ ಕುಳ್ಳಮ್ಮನವರ ಕುಟುಂಬದ ಸದಸ್ಯರ ರೋಧನ ಮುಗಿಲು ಮುಟ್ಟುವಂತಿತ್ತು. ಮಗಳು ಝಾನ್ಸಿಯನ್ನು ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ಅನಿಲ್ ಕುಮಾರ್ ಅವರಿಗೆ ವಿವಾಹ ಮಾಡಿಕೊಟ್ಟಿದ್ದರೂ ಅನಿಲ್ ಕುಟುಂಬ ಸರಗೂರಿನಲ್ಲಿ ವಾಸವಿರಲಿಲ್ಲ. ಕೆಲವು ವರ್ಷಗಳ ಹಿಂದೆಯೇ ಅನಿಲ್ ಕುಮಾರ್ ಕುಟುಂಬ ಕೇರಳದ ಮುಂಡಕೈ ನಲ್ಲಿ ನೆಲೆಸಿದ್ದು ಇತ್ತೀಚೆಗೆ ತಾನೇ ಹೊಸದಾಗಿ ಸ್ವಂತ ಮನೆಯೊಂದನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಇದೀಗ ಮನೆಯ ಸಮೇತ ಮಗು ಮತ್ತು ಅತ್ತೆಯನ್ನು ಕಳೆದುಕೊಂಡ ಝಾನ್ಸಿ ಕುಟುಂಬ ಸಂಕಷ್ಠಕ್ಕೆ ಸಿಲುಕಿದೆ. ಹೇಗಾದರೂ ಸರಿಯೇ ದುರ್ಮರಣ ಹೊಂದಿರುವ ಮಗು ನಿಹಾಲ್ ಹಾಗೂ ಲೀಲಾವತಿ ಅವರ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಕತ್ತರಘಟ್ಟ ಗ್ರಾಮಕ್ಕೆ ತರಿಸಿಕೊಡಿ ಹಾಗೂ ಗಾಯಾಳುಗಳಾಗಿರುವ ಅಳಿಯ ಅನಿಲ್ ಕುಮಾರ್ ಮತ್ತು ಅವರ ತಂದೆ ದೇವರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆತರಲು ಸಹಾಯ ಮಾಡುವಂತೆ ಕುಳ್ಳಮ್ಮನವರ ಕುಟುಂಬಸ್ಥರು ಶಾಸಕ ಹೆಚ್.ಟಿ.ಮಂಜು ಅವರಿಗೆ ಮನವಿ ಮಾಡಿದರು.
ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಹೆಚ್.ಟಿ.ಮಂಜು ದುರಂತದಲ್ಲಿ ನಿಧನರಾಗಿರುವವರ ಶವಗಳನ್ನು ಹೊರತೆಗೆದು ಕುಟುಂಬಸ್ಥರಿಗೆ ಒಪ್ಪಿಸಿವ ಬಗ್ಗೆ ಈಗಾಗಲೇ ನಾನು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಮಂಡ್ಯ ಜಿಲ್ಲಾಧಿಕಾರಿಗಳು ಘಟನೆಯ ಸಂಬಂಧ ಈಗಾಗಲೇ ವೈನಾಡಿನ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ರಾಜ್ಯ ಸರ್ಕಾರವೂ ಸಂತ್ರಸ್ಥ ಕುಟುಂಬಗಳ ನೆರವಿಗೆ ನಿಂತಿದೆ. ಪ್ರಕೃತಿಯ ಮುಂದೆ ನಾವೆಲ್ಲರೂ ಅಸಹಾಯಕರು. ದುರಂತಕ್ಕೊಳಗಾದ ನಿಮ್ಮ ಕುಟುಂಬದ ನೆರವಿಗೆ ನಾನು ನಿಲ್ಲುತ್ತೇನೆಂದು ಕುಳ್ಳಮ್ಮ ಹಾಗೂ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಗ್ರಾ.ಪಂ ಸದಸ್ಯ ಪರಮೇಶ್, ಡೈರಿ ಚಂದ್ರಶೇಖರ್, ಕಾಯಿ ಮಹೇಶ್, ಆಟೋ ರಂಗಣ್ಣ, ಪಾಂಡುರಂಗ ಸ್ವಾಮಿ ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಹಲವರಿದ್ದರು.