ಪ್ರತಾಪ್ ಸಿಂಹ ಬಹಿರಂಗ ಕ್ಷಮೆಯಾಚನೆಗೆ ಮೂಡ್ಲುಪುರ ನಂದೀಶ್ ಆಗ್ರಹ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.01- ಅಖಿಲ ಭಾರತ ವೀರಶೈವ ಲಿಂಗಾಯತ ಸಂಘಟನೆ ಹಾಗೂ ಸಂಘದ ಅಂತರಿಕ ಚುನಾವಣೆ ವಿಚಾರದಲ್ಲಿ ಮೂಗು ತೂರಿಸುವ ಜೊತೆಗೆ ಸಮಾಜದ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಸಮಾಜದ ಬಂಧುಗಳಲ್ಲಿ ಬಹಿರಂಗ ಕ್ಷಮೆ ಯಾಚನೆ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರುವ ಪ್ರತಾಪ್ ಸಿಂಹ ನಮ್ಮ ನಾಯಕರಾದ ಯಡಿಯೂರಪ್ಪ, ಶಾವನೂರು ಶಿವಶಂಕರಪ್ಪ ಹಾಗೂ ವೀರಶೈವ ಲಿಂಗಾಯತ ಸಮಾಜದ ಬಗ್ಗೆ ಮತ್ತು ಚುನಾವಣೆಯ ಪ್ರಕ್ರಿಯೆ ಕುರಿತು ಹಗುರುವಾಗಿ ಮಾತನಾಡಿರುವುದು ಅವರಿಗೆ ಶೋಭೆಯಲ್ಲ. ಈ ಕೂಡಲೇ ಮಹಾಸಭೆಯ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಹಾಸಭಾ ಪದಾಧಿಕಾರಿಗಳು ಅವರ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಮ್ಮ ಭಾಷಣದಲ್ಲಿ ಯಡಿಯೂರಪ್ಪ ಅವರು ಮಕ್ಕಳನ್ನು ಬೆಳೆಸುತ್ತಿದ್ದಾರೆ. ಸಿದ್ದರಾಮಯ್ಯ, ಎಚ್.ಡಿ. ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಮಕ್ಕಳ ಮೇಲೆ ಪ್ರೀತಿ ಹೆಚ್ಚು. ಹೀಗಾಗಿ ಇವರಿಗೆ ರಾಜ್ಯ ಜನರಿಗಿಂತ ಮಕ್ಕಳನ್ನು ರಾಜಕೀಯವಾಗಿ ಬೆಳೆಸುವುದೇ ಚಿಂತೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿಯು ಸಹ ಕುಟುಂಬಗಳಿಗೆ ಟಿಕೆಟ್ ನೀಡಲಾಗಿದೆ ಎಂಬ ಬಾಲಿಶ ಹೇಳಿಕೆಯನ್ನು ನೀಡಿದ್ದಾರೆ. ಸಂಸತ್ ಟಿಕೆಟ್ ಕೈ ತಪ್ಪಿಸಿದ್ದರಿಂದ ಇಂಥ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ಹತಾಶೆಯ ಮನೋಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನನಗೆ ಟಿಕೆಟ್ ಸಿಗದಿರಲು ವಿಜಯೇಂದ್ರ ಕಾರಣ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಿರುವುದು ಸರಿಯಲ್ಲ. ಅವರಿಗೆ ಏಕೆ ಟಿಕೆಟ್ ದೊರೆಯಲಿಲ್ಲ ಎಂಬ ಸತ್ಯ ಅವರಿಗೂ ಸಹ ಗೊತ್ತಿದಿದೆ. ಹೀಗಾಗಿ ಸಮಾಜದ ಹಿರಿಯರ ಬಗ್ಗೆ ಮಾತನಾಡುವಾಗ ಮತ್ತು ಸಮಾಜದ ವಿರುದ್ದ ಹೇಳಿಕೆ ನೀಡುವುದನ್ನು ಇನ್ನಾದರು ನಿಲ್ಲಿಸಲಿ. ತಿದ್ದುಕೊಂಡು ನಡೆದರೆ ಉಳಿತು ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಸಮಾಜದ ಆಸ್ತಿ ಜೊತೆಗೆ ಜಾತ್ಯತೀತ ನಿಲುವು ಹೊಂದಿರುವ ಎಲ್ಲ ವರ್ಗದವರನ್ನು ಪ್ರೀತಿ ವಿಶ್ವಾಸವನ್ನು ಗಳಿಸಿ, ದೊಡ್ಡ ನಾಯಕರಾಗಿದ್ದಾರೆ. ಎಲ್ಲಾ ಜಾತಿ, ಹಾಗೂ ವರ್ಗದವರಿಗೆ ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಪ್ರತಾಪ್ ಸಿಂಹ ಅವರು ಎರಡು ಬಾರಿ ಸಂಸದರಾಗಲು ಯಡಿಯೂರಪ್ಪ ಅವರ ಕೊಡುಗೆ ಕಾರಣ. ಬಿಜೆಪಿ ರಾಜ್ಯಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಪಕ್ಷದ ಸಂಘಟನೆ ಮತ್ತು ವರ್ಚಸ್ಸು ನೋಡಿ ಹೈಕಮಾಂಡ್ ರಾಜ್ಯಾಧ್ಯಕ್ಷ ಪದವಿ ನೀಡುತ್ತಿದೆಯೇ ಹೊರತು, ಅವರ ಸ್ವಂತ ಶಕ್ತಿ ಮತ್ತು ಸಾಮಥ್ರ್ಯದಿಂದ ನಾಯಕರಾಗಿ ಬೆಳೆಯುತ್ತಿದ್ದಾರೆ. ಅದರೆ ಪ್ರತಾಪ್‍ಸಿಂಹ ಅವರು ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ ಎಂಬರ್ಥದಲ್ಲಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಗೋಷ್ಠಿಯಲ್ಲಿ ಮಹಾಸಭಾದ ಜಿಲ್ಲಾ ನಿರ್ದೇಶಕರಾದ ಬಿಸಲವಾಡಿ ಉಮೇಶ್, ಪುಣಜನೂರು ಗಿರೀಶ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಜಿ. ಮಹದೇವಪ್ಪ ದೇವರಹಳ್ಳಿ, ಹನೂರು ತಾಲೂಕು ಅಧ್ಯಕ್ಷ ಸೋಮಶೇಖರ್ ಇದ್ದರು.