ಮಕ್ಕಳನ್ನು ಭಿಕ್ಷಾಟನೆ, ಜೀತ ಮುಕ್ತಿಗೊಳಿಸಲು ಕೈಜೋಡಿಸಿ
ಕೋಲಾರ,ಆ.೧-:ಮಾನವ ಕಳ್ಳ ಸಾಗಾಣಿಕೆ ಒಂದು ಸಾಮಾಜಿಕ ಪಿಡುಗಾಗಿದ್ದು, ಇದರ ತಡೆಗೆ ಜಾಗೃತಿ ಮೂಡಿಸುವುದರ ಜತೆಗೆ ಮಕ್ಕಳನ್ನು ಜೀತ ಮತ್ತು ಭಿಕ್ಷಾಟನೆಗೆ ಪ್ರರೇಪಿಸುವ ಕೃತ್ಯಗಳ ತಡೆಗೆ ವಿದ್ಯಾರ್ಥಿ ಸಮುದಾಯ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ಕರೆ ನೀಡಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕಾನೂನು ಸೇವೆಗಳ ಪ್ರಾಧಿಕಾರ ಶಾಲಾ ಶಿಕ್ಷಣ ಇಲಾಖೆ,ಮಹಿಳಾ ಮತ್ತುಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳು, ಮಹಿಳೆಯರನ್ನು ಜೀತ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು, ಮಕ್ಕಳನ್ನು ಬಾಲಕಾರ್ಮಿಕರಾಗಿ ನೇಮಿಸಿಕೊಳ್ಳುವುದು ಭಿಕ್ಷಾಟನೆಗೆ ತೊಡಗಿಸುವುದು ಅಪರಾಧವಾಗಿದ್ದು, ಅದಕ್ಕಾಗಿಯೇ ಮಾನವ ಕಳ್ಳ ಸಾಗಾಣಿಕೆ ಮಾಡುವ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಸಿದರು.
ಮಾನವ ಕಳ್ಳಸಾಗಾಣಿಕೆ ಬಗ್ಗೆ ತಿಳಿದು ಬಂದರೆ ಕೂಡಲೇ ಮಹಿಳಾ ಸಹಾಯವಾಣಿ ೧೦೯೧ ಹಾಗೂ ಮಕ್ಕಳ ಸಹಾಯವಾಣಿ ೧೦೯೮ಗೆ ಮಾಹಿತಿ ನೀಡುವ ಮೂಲಕ ಅವರನ್ನು ರಕ್ಷಿಸುವ ಸಾಮಾಜಿಕ ಕಾಳಜಿ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಲಿ ಮಾನವ ಕಳ್ಳಸಾಗಾಣಿಕೆ, ಮಾದಕ ವಸ್ತುಗಳ ಬಳಕೆಯಿಂದಾಗಿ ಮಹಿಳೆಯರು,ಮಕ್ಕಳ ಜೀವನ ಹಾಳಾಗುತ್ತಿದ್ದು, ಇವುಗಳಿಂದ ರಕ್ಷಿಸಲು ನಿರಂತರ ಜಾಗೃತಿ ಅಗತ್ಯ ಎಂದರು.
ಕೆಜಿಎಫ್‌ನ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ನಾಗರತ್ನ ಮಾತನಾಡಿ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಿಂದಾಗಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ, ಮಕ್ಕಳು ಮೊಬೈಲ್‌ಗಳಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಮೊಬೈಲ್ ದುಷ್ಟರಿಣಾಮಗಳ ಕುರಿತು ಮಕ್ಕಳಿಗೆ ಅರಿವು ನೀಡುವ ಕೆಲಸವಾಗಲಿ ಎಂದರು.
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಹಲವಾರು ಕಠಿಣ ಕಾನೂನುಗಳು ಜಾರಿಯಾಗಿವೆ ಎಂದು ತಿಳಿಸಿದ ಅವರು, ಮಕ್ಕಳ ರಕ್ಷಣಾ ಘಟಕದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕಿಯರ ಪಿಯು ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ ವಹಿಸಿದ್ದು, ಉಪಪ್ರಾಂಶುಪಾಲೆ ಫರೀದಾ ಬೇಗಂ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.