ಆತ್ಮಹತ್ಯೆ ಪರಿಹಾರವಲ್ಲ, ಸಾವಯವ ಕೃಷಿ ಕೈಗೊಳ್ಳಲು ಬಸನಾಯಕ್ ಕರೆ
ಕಲಬುರಗಿ: ಜು.31:ಸಾಲದ ಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಯಾವುದೇ ಪರಿಹಾರ ಸಿಗದು ಎಂದು ಕೃಷಿ ಮಹಾವಿದ್ಯಾಲಯದ ರಾಷ್ಟಿçÃಯ ಸೇವಾ ಯೋಜನೆಯ ಸಂಯೋಜಕ ಡಾ. ರಾಜಶೇಖರ್ ಟಿ. ಬಸನಾಯಕ್ ಅವರು ಹೇಳಿದರು.
ರೈತರ ಆತ್ಮಹತ್ಯೆ ತಡೆ ಕುರಿತು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮುಂದಾಳತ್ವದಲ್ಲಿ ಜರುಗಿದ ಕೃಷಿ ಜಾತ್ರೆಯಲ್ಲಿ ಮಾತನಾಡಿದ ಅವರು, ರೈತರ ಸಾಲದ ಹೊರೆಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ, ಕೃಷಿ ವಿಜ್ಞಾನಿಗಳ ಸಲಹೆಯಂತೆ ಸಾವಯವ ಕೃಷಿ ಮಾಡಿ ಸಾಧನೆ ಮಾಡಬಹುದು ಎಂದರು.
ನಾಟಕದ ವಿಶೇಷತೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ ಮಲ್ಲಿಕಾರ್ಜುನ್ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ್ ಸ್ವಾಮಿಜಿಗಳ ಪಾತ್ರವನ್ನು ಅವರ ಪ್ರತಿಬಿಂಬವಾಗಿ ಮತ್ತು ಅತ್ಯಂತ ನೈಜವಾಗಿ ಶ್ರೀಗಳೇ ಬಂದು ಖುದ್ದಾಗಿ ತಿಳುವಳಿಕೆ ನೀಡಿ ಮಾಡಿದ ಅಭಿನಯ ನೆರೆದ ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.
ಗೋಪಾಲ ಭಾಯಿ ಸುತಾರಿಯಾ ಅವರ ಪಾತ್ರವನ್ನು ಮಾಡಿದ ಅಭಿಷೇಕ್ ಎ. ಕುಲಕರ್ಣಿ ಅವರು ಗೋಕೃಪಾ ಅಮೃತದ ಕುರಿತು ಮಾಹಿತಿಯನ್ನು ನೀಡಿದ್ದು ಜನರ ಮೆಚ್ಚುಗೆ ಪಡೆಯಿತು. ಒಟ್ಟಾರೆಯಾಗಿ ಕೃಷಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಬದುಕಿನಲ್ಲಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕು ಯಾವುದೇ ಕಾರಣಕ್ಕೂ ಸಾವನ್ನಪ್ಪದೇ ಸವಾಲುಗಳನ್ನು ಸ್ವೀಕರಿಸಿ ಬದುಕಬೇಕೆಂಬುದನ್ನು ನಾಟಕದ ಮೂಲಕ ತಿಳಿಸಿಕೊಟ್ಟರು.
ನಾಟಕದ ಕೊನೆಯಲ್ಲಿ ರೈತರಾದ ನಾವು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಆತ್ಮಹತ್ಯೆ ಮಹಾಪಾಪ ಎಂಬುವುದನ್ನು ಬೋಧಿಸಲಾಯಿತು. ನಾಟಕ ನಿರ್ದೇಶನವನ್ನು ಚಿತ್ತಾಪುರ ತಾಲ್ಲೂಕಿನ ಭೀಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಶೇಷ ನಾಟಕ ಶಿಕ್ಷಕ ರಾಘವೇಂದ್ರ ಹಳಿಪೇಟ್ ಅವರು ಮಾಡಿದರು. ಕೃಷಿ ಕಾಲೇಜಿನ ಡೀನ್ ಡಾ. ಮಹಾಲಿಂಗಪ್ಪ ಎಂ. ಧನೋಜಿ ಅವರು ಮಾತನಾಡಿ, ರೈತರ ಆತ್ಮಹತ್ಯೆ ತಡೆಯುವುದು ಸರ್ಕಾರದ ಕೆಲಸವಲ್ಲ. ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಸೇರಿ ರೈತರನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಬಲಪಡಿಸೋಣವೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಶಿಕಾಂತ್ ಬಿ. ಪಾಟೀಲ್, ಗೌರವ ಕಾರ್ಯದರ್ಶಿ ಮಂಜುನಾಥ್ ಜೇವರ್ಗಿ, ಕೃಷಿ ಉಪ ಸಮಿತಿಯ ಅಧ್ಯಕ್ಷ ಜಗದೀಶ್ ಗಾಜರೆ ಮತ್ತು ಇತರೆ ಪದಾಧಿಕಾರಿಗಳು ಮತ್ತು ಡಾ. ಸೌಮ್ಯ ಮುಂತಾದವರು ಉಪಸ್ಥಿತರಿದ್ದರು. ಕೃಷಿ ವಿದ್ಯಾರ್ಥಿಗಳ ನಾಟಕ ಜನ ಮನ ಸೆಳೆಯಿತು. ಮಂಡಳಿಯ ವತಿಯಿಂದ ನಾಟಕ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.