ನಾಗೂರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ
ಕಲಬುರಗಿ:ಜು.31: ಕಮಲಾಪುರ ತಾಲೂಕಿನ ನಾಗೂರ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಂಗಳವಾರ ಉದ್ಘಾಟಿಸಿದರು.
ನಂತರ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲು ಅಧಿಕಾರಿಗಳು ಮನೆ ಬಾಗಿಲಿಗೆ ಬಂದಿದ್ದು, ಇದರ ಲಾಭ ಪಡೆಯಬೇಕು ಎಂದರು.
ಜಿ.ಪಂ. ಸಿಓಓ ಅವರು ಪ್ರೌಢ ಶಾಲೆ ಹಾಗೂ ಅಂಗನವಾಡಿ ಭೇಟಿ: ನಾಗೂರ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೋಧಿಸಿ ಅವರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಸ್ಥಳದಲ್ಲಿದ್ದ ಮುಖ್ಯ ಗುರುಗಳಿಗೆ ಹಾಗೂ ಶಿಕ್ಷಕರಿಗೆ ಸೂಚಿಸಿದರು. ಶಾಲಾ ಆವರಣದಲ್ಲಿ ಕಿಚನ್ ಗಾರ್ಡನ್ ನಿರ್ಮಾಣ ಮಾಡಲು ಸೂಚಿಸಿದರು. ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ನೀಡಬೇಕು ಎಂದು ಸ್ಥಳದಲ್ಲಿದ್ದ ಸಿಡಿಪಿಓ ಅವರಿಗೆ ಸೂಚಿಸಿದರು.
ಈ ಗ್ರಾಮ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.