ಪಾಟಾ ತುಂಡಾಗಿ ಊರೊಳಗೆ ನುಗ್ಗಿದ ಬಸ್: ಪ್ರಯಾಣಿಕರು, ಗ್ರಾಮಸ್ಥರು ಪ್ರಾಣಾಪಾಯದಿಂದ ಪಾರು
ವಿಜಯಪುರ, ಜು.31 :ಪಾಟಾ ತುಂಡಾಗಿ ಚಲಿಸುತ್ತಿರುವ ಸರ್ಕಾರಿ ಬಸ್ ರಸ್ತೆ ಬಿಟ್ಟು ಊರೊಳಗೆ ನುಗ್ಗಿದ್ದು, ಊರಲ್ಲಿನ ಜನ ಪ್ರಾಣ ಉಳಿಸಿಕೊಳ್ಳಲು ದಿಕ್ಕಾ ಪಾಲಾಗಿ ಓಡಿದ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಗ್ರಾಮದಲ್ಲಿ ಬುಧವಾರ ಬೆಳಗ್ಗೆ 8-30 ಗಂಟೆಗೆ ನಡೆದಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಬಸ್ ಪಾಟಾ ತುಂಡಾಗಿ ನೋಡು ನೋಡುತ್ತಿದ್ದಂತೆ ಊರಲ್ಲಿ ನುಗ್ಗಿದೆ. ಆಗ ಮನೆ ಮುಂದೆ ಕುಳಿತ ಜನರು ಗಾಬರಿಯಿಂದ ಪ್ರಾಣ ಉಳಿಸಿಕೊಳ್ಳಲು ದಿಕ್ಕಾ ಪಾಲಾಗಿ ಓಡಿದ್ದಾರೆ. ಕ್ಷಣಾರ್ಧದಲ್ಲಿ ಬಸ್ ಊರಲ್ಲಿನ ಮುಳ್ಳು, ಗಿಡಗಂಟಿಗಳ ಪೊದೆಯಲ್ಲಿ ಶರ ವೇಗದಿಂದ ಓಡಿದೆ. ಚಾಲಕ ಧೈರ್ಯದಿಂದ ಸ್ಟೇರಿಂಗ್ ಹಿಡಿದು ಯಾವುದೇ ಮನೆ, ಗಿಡಗಳಿಗೆ ನುಗ್ಗದಂತೆ ಪ್ರಯಾಸ ಪಟ್ಟು ನಿಯಂತ್ರಿಸುವಲ್ಲಿ ಹರ ಸಾಹಸ ಪಟ್ಟ.
ಸುದೈವ ವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ ಎಂಬುವುದೇ ದೊಡ್ಡ ಸಮಾಧಾನ.
ಮುದ್ದೇಬಿಹಾಳ ಘಟಕಕ್ಕೆ ಸೇರಿದ ಈ ಬಸ್ ಮುದ್ದೇಬಿಹಾಳ-ನಾರಾಯಣಪುರ ಮಾರ್ಗದಲ್ಲಿ ಹಿರೇಮುರಾಳ ಗ್ರಾಮದ ಬಳಿ ನೆರೆಬೆಂಚಿ ಕ್ರಾಸ್ ನಲ್ಲಿ ಚಲಿಸುತ್ತಿತ್ತು. ಆಗ ಈ ಅವಘಡ ಸಂಭವಿಸಿದೆ.
ಬಸ್ಸಿನ ಸ್ಟೇರಿಂಗ್, ಪಾಟಾದಲ್ಲಿ ಸಮಸ್ಯೆ ಇದ್ದು ದುರಸ್ತಿ ಮಾಡುವಂತೆ ಘಟಕದ ಮೆಕ್ಯಾನಿಕಗಳಿಗೆ ಹಲವು ಬಾರಿ ಹೇಳಿದ್ದರೂ ಅವರು ದುರಸ್ತಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದು ಈ ಘಟನೆಗೆ ಕಾರಣ ಎಂದು ಬಸ್ಸಿನ ಚಾಲಕ ಆರೋಪಿಸಿದ್ದಾರೆ. ಘಟಕ ವ್ಯವಸ್ಥಾಪಕ ಎ.ಎಚ್.ಮದಭಾವಿ ಅವರು ತಾಂತ್ರಿಕ ಸಿಬ್ಬಂದಿ ಸಮೇತ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಚಾಲಕನ ನಿರ್ಲಕ್ಷ್ಯ ಮತ್ತು ವೇಗದ ಚಾಲನೆ ಈ ಘಟನೆಗೆ ಕಾರಣ ಎಂದು ತಿಳಿಸಿದ್ದಾರೆ. ಬಸ್ಸು ಮನೆಗಳೊಳಗೆ ನುಗ್ಗಿದ್ದರೆ ಭಾರೀ ಹಾನಿ ಸಂಭವಿಸುವ ಅಪಾಯ ಇತ್ತು.
ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.