ನೀಲೂರ ಗ್ರಾಮದ ವಸತಿ ನಿಲಯದ ಸಮಸ್ಯೆ ಬಗೆಹರಿಸಲು ಆಗ್ರಹ
ಕಲಬುರಗಿ :ಜು.31:ಅಫಜಲಪುರ ತಾಲೂಕಿನ ನೀಲೂರ ಗ್ರಾಮದ ಡಿ. ದೇವರಾಜ ಆರಸ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಅವ್ಯವಹಾರ ಹಾಗೂ ಮೇಲ್ವಿಚಾರಕರು ತಮ್ಮ ಮನಸ್ಸಿಗೆ ಬಂದAತೆ ವರ್ತಿಸುತ್ತಿದ್ದು, ಕೂಡಲೇ ಇದರ ಬಗ್ಗೆ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಭಾರತೀಯ ಯುವ ಸೈನ್ಯ ಮಹಿಳಾ ಘಟಕದ ವತಿಯಿಂದ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಡಿ. ದೇವರಾಜ ಅರಸ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸುಮಾರು 10 ವರ್ಷಗಳಿಂದ ವಾರ್ಡನ್ ನಾಮಕವಾಸ್ತಿ ಮಾತ್ರ ಇದ್ದು, ಸಂಘಟನೆ ವತಿಯಿಂದ ನಿಲಯಕ್ಕೆ ಭೇಟಿ ನೀಡಿದಾಗ ಅವರು ಅಲ್ಲಿ ವಾರ್ಡನ್ ಇರುವುದಿಲ್ಲ ಮತ್ತು ವಾರ್ಡನ್ ಕೆಲಸವನ್ನು ಅಲ್ಲಿ ಅಡುಗೆ ಸಹಾಯಕಿ ಮತ್ತು ಗುತ್ತಿಗೆ ಆಧಾರದ ಮೇಲೆ ಒಬ್ಬ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಸತಿ ಶಾಲೆಯಲ್ಲಿ ಕುಡಿಯುವ ನೀರು, ಮಕ್ಕಳಿಗೆ ಮಲಗಿಕೊಳ್ಳುವ ವ್ಯವಸ್ಥೆ ಮತ್ತು ಸ್ನಾನ ಮಾಡಲು ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 15ಕ್ಕೆ ಇಳಿದಿದೆ. ಈ ಮಕ್ಕಳು ನೀಲೂರ ಗ್ರಾಮದವರಾಗಿರುತ್ತಾರೆ ಎಂಬ ಮಾಹಿತಿ ಇರುತ್ತದೆ. ಕೆಲಸ ನಿರ್ವಹಿಸುತ್ತಿರುವ ಕೆಲಸದವರು ಬಿಸಿಯೂಟಕ್ಕೆ ಬಂದಿರುವ ದಾಸ್ತಾನುಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗುವುದು ಮಾಡುತ್ತಿದ್ದು, ವಾರ್ಡನ್ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವುದ- ರಿಂದ ವಸತಿ ನಿಲಯ ದುಸ್ಥಿತಿಗೆ ಬಂದಿದೆ. ಕೂಡಲೇ ಈ ಕುರಿತು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಚಿಂಚನಸೂರ್, ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ ಕಟ್ಟಿಮನಿ, ಹಣಮಂತ, ಪ್ರವೀಣ, ರಫೀಕ್ ಪಟೇಲ್, ಶರಣು ಬೇಲೂರ, ಮಹಿಳಾ ಘಟಕದ ಉಪಾಧ್ಯಕ್ಷೆಯಾದ ಮಾಲಾಶ್ರೀ ಗಡದ್, ಸವಿತಾ ತೀರ್ಥಕರ್ ಇತರರು ಭಾಗವಹಿಸಿದ್ದರು.