ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ
ಕಲಬುರಗಿ:ಜು.31:ಮಹರ್ಷಿ ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಎಸ್ ಸಿ ಪಿ /ಟಿ ಎಸ್ ಪಿ ಮೀಸಲು ಅನುದಾನ ದುರ್ಬಳಕೆ ಮಾಡಿಕೊಂಡಿರುವ ಸಿದ್ದರಾಮಯ್ಯ ಇವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು ಹಾಗೂ ಇಡೀ ಪ್ರಕರಣವನ್ನು ಸಿ ಬಿ ಐ ತನಿಖೆಗೆ ಒಪ್ಪಿಸುವಂತೆ ಸ್ವಾಭಿಮಾನಿ ಎಸ್ಸಿ /ಎಸ್ಟಿ ಸಂಘಟನೆಗಳ ಒಕ್ಕೂಟದ ನಿಯೋಗವು ರಾಜ್ಯಪಾಲರನ್ನು ಭೇಟಿಯಾಗಿ ಒತ್ತಾಯಿಸಲಾಯಿತು.
ನಿಗಮದ ಅಧೀಕ್ಷಕ ಚಂದ್ರಶೇಖರ್ ಸಾವಿನ ಪ್ರಕರಣದಿಂದಾಗಿ 187 ಕೋಟಿ ರೂಪಾಯಿಗಳ ಅಕ್ರಮ ವರ್ಗಾವಣೆ ಹೊರಬಂದಿದ್ದು ಸಂಬAಧಿಸಿದ ಸಚಿವ ನಾಗೇಂದ್ರ ಜೈಲು ಪಾಲಾಗಿದ್ದು ನಿಗಮದ ಅಧ್ಯಕ್ಷ ದದ್ದಲ್ ಪಲಾಯನಗೊಂಡಿದ್ದು ಎಸ್ ಐ ಟಿ ಮತ್ತು ಈಡಿ ತನಿಖೆಯಿಂದ ಇನ್ನಷ್ಟು ಅಕ್ರಮಗಳು ಹೊರಬೀಳುತ್ತಿವೆ.
ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆ ಹೊತ್ತಿರುವುದರಿಂದ ಇವರ ಕಣ್ತಪ್ಪಿ ಹೇಗೆ ಹಗರಣ ನಡೆಯಿತು ಎನ್ನುವುದನ್ನು ಬಟಾ ಬಯಲು ಮಾಡಲು ಸಿ ಬಿ ಐ ತನಿಖೆಗೆ ಒಪ್ಪಿಸಬೇಕು ಮತ್ತು ಇದೊಂದು ಆರ್ಥಿಕ ಅಟ್ರಾಸಿಟಿ ಎಂದು ತಿಳಿದು ಪ್ರಕರಣ ದಾಖಲಿಸಬೇಕು ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಲಾಯಿತು.
ಅದರಂತೆ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪ್ರತಿಭಾವಂತ ಎಸ್ಸಿ /ಎಸ್ಟಿ ವಿದ್ಯಾರ್ಥಿ ಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಮತ್ತು ವಿದೇಶಿ ವಿದ್ಯಾರ್ಥಿ ವೇತನ ಕಡಿತಗೊಳಿಸುವ ಮೂಲಕ ಮುಖಮಂತ್ರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ .ಈ ಎಲ್ಲಾ ಯೋಜನೆಗಳನ್ನು ಮುಂದುವರಿಸಲು ಸೂಕ್ತ ಜರುಗಿಸಬೇಕೆಂದು ಒತ್ತಾಯಿಸಲಾಯಿತು .
ಆರ್‌ಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಬಿ ಹೊಸಮನಿ, ಆರ್‌ಪಿಯ್ ರಾಜ್ಯಾಧ್ಯಕ್ಷ ಸತೀಶ್ ಹಾಸನ, ಸಂಚಾಲಕ ಅಂಬರೀಷ್ ಡಿಎಂ, ಎಸ್‌ಎಸ್‌ಡಿ ಮಹಿಳಾ ರಾಜ್ಯಾಧ್ಯಕ್ಷೆ ರೂಪಕಲಾ ಹಾಗೂ ಡಿಎಸ್‌ಎಸ್‌ನ ಕೃಷ್ಣ ನಿಯೋಗದಲ್ಲಿದ್ದರು.