ಆ. 2 ರಂದು ತಿಕೋಟಾದಲ್ಲಿ ದ್ರಾಕ್ಷಿ ಬೆಳೆಗಾರರ ಸಂವಾದ
ಅಫಜಲಪುರ:ಜು.31:ಪಕ್ಕದ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಮಲ್ಲಿಕಾರ್ಜುನ ಮಂಗಲ ಕಾರ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಸ್ಟ್ 2ರಂದು ಬೆಳಿಗ್ಗೆ 11ಗಂಟೆಗೆ ಹೊಸ ದ್ರಾಕ್ಷಿ ತಳಿಯನ್ನು ಉತ್ತರ ಕರ್ನಾಟಕಕ್ಕೆ ಪರಿಚಯಿಸಲು ಸಹ್ಯಾದ್ರಿ ಫಾರ್ಮ್ಸ್ ನಾಸಿಕ್ ಅಧ್ಯಕ್ಷರಾದ ವಿಲಾಸರಾವ ಸಿಂದೆ ಆಗಮಿಸಲಿದ್ದಾರೆ.ಹೀಗಾಗಿ ದ್ರಾಕ್ಷಿ ಬೆಳೆಯಲು ಆಸಕ್ತಿ ಹೊಂದಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ದ್ರಾಕ್ಷಿ ಬೆಳೆಗಾರರಾದ ಜೆ.ಎಂ.ಕೊರಬು ಮನವಿ ಮಾಡಿಕೊಂಡಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಉತ್ತರ ಕರ್ನಾಟಕಕ್ಕೆ ದ್ರಾಕ್ಷಿಯ ಹೊಸ ತಳಿ ಆರಾ-35 ಪರಿಚಯಿಸಲು ಸಹ್ಯಾದ್ರಿ ಫಾರ್ಮ್ಸ್ ನಾಸಿಕ್ ಹಾಗೂ ಅವರ ತಂಡ ಉತ್ತರ ಕರ್ನಾಟಕದ ದ್ರಾಕ್ಷಿ ಬೆಳೆಗಾರರ ಆಸಕ್ತಿಯನ್ನು ಕಂಡು ಹೊಸ ದ್ರಾಕ್ಷಿ ತಳಿಗಳನ್ನು ಬೆಳೆಯಲು ಸೂಕ್ತವಾದ ವಾತಾವರಣ ಮತ್ತು ರೈತರ ಇಚ್ಛಾಶಕ್ತಿಯನ್ನು ಅರ್ಥೈಸಿಕೊಳ್ಳಲು ತಿಕೋಟಾ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ.ದ್ರಾಕ್ಷಿ ಬೆಳೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ವಿಲಾಸರಾವ ಸಿಂದೆ ಅವರಿಂದ ರೈತರಿಗೆ ಹೊಸ ದ್ರಾಕ್ಷಿ ತಳಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.ಈಗಾಗಲೇ ನಾಸಿಕ್ ಮತ್ತು ಪಂಢರಾಪುರ ಭಾಗದಲ್ಲಿ ಈ ಹೊಸ ತಳಿಯನ್ನು ಪ್ರಯೋಗ ಮಾಡಿ ಉತ್ತಮ ಬೆಳೆಯನ್ನು ಬೆಳೆದಿದ್ದಾರೆ.ಕರ್ನಾಟಕ ರೈತರ ಪ್ರತ್ಯೇಕ ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸಲು ಒಂದು ಸಾವಿರ ಅತ್ಯವಶ್ಯಕ ಷೇರುಗಳು ಬೇಕು.ಹೀಗಾಗಿ ಈಗಾಗಲೇ ನೋಂದಣಿ ಪ್ರಾರಂಭಿಸಿದ್ದು, ಷೇರು ಪಡೆಯಲು ಮತ್ತು ಆರಾ-35 ಹೊಸ ತಳಿಯನ್ನು ಬೆಳೆಯಲು ಇಚ್ಛಿಸುವವರು ನೋಂದಣಿ ಮಾಡಿಕೊಳ್ಳಬೇಕು.ಈಗಾಗಲೇ ತಿಕೋಟಾ, ವಿಜಯಪುರ ಮತ್ತು ಅಫಜಲಪುರ ಭಾಗದ ರೈತರು ಕೂಡ ಅಲ್ಲಿನ ದ್ರಾಕ್ಷಿ ತೋಟಗಳಿಗೆ ತೆರಳಿ ಮಾಹಿತಿ ಪಡೆದುಕೊಂಡು ಬಂದಿದ್ದಾರೆ.ಈಗಾಗಲೇ ರೈತರು ಅನೇಕ ಸ್ಥಳೀಯ ದ್ರಾಕ್ಷಿಗಳನ್ನು ಬೆಳೆಯುತ್ತಿದ್ದಾರೆ.ಆದರೆ ಉತ್ತಮವಾದ ಈ ಹೊಸ ದ್ರಾಕ್ಷಿ ತಳಿಯನ್ನು ರೈತರು ಬೆಳೆಯಲು ಮುಂದಾಗಬೇಕು,ಆಸಕ್ತಿ ಹೊಂದಿದ ರೈತರಿಗೆ ಖುದ್ದಾಗಿ ಸಹ್ಯಾದ್ರಿ ಫಾರ್ಮ್ಸ್ ನಾಸಿಕ್ ಅವರೇ ದ್ರಾಕ್ಷಿ ಸಸಿಗಳನ್ನು ನೀಡಿ,ಮುಂದೆ ಅವರೇ ಉತ್ತಮ ಬೆಲೆಗೆ ಖರೀದಿ ಮಾಡುತ್ತಾರೆ.ಅಲ್ಲದೇ ಅದಕ್ಕೆ ಬೇಕಾದ ಪೂರಕ ಯಂತ್ರೋಪಕರಣಗಳು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ.ಹೀಗಾಗಿ ಕರ್ನಾಟಕದಲ್ಲಿ ಹೊಸ ದ್ರಾಕ್ಷಿ ತಳಿಯನ್ನು ಪರಿಚಯಿಸಲು ವಿಲಾಸರಾವ ಸಿಂದೆ ಅವರಿಗೆ ನಿರಂತರವಾಗಿ ಸಂಪರ್ಕಿಸಿ ರೈತರ ಬೇಡಿಕೆಯಂತೆ ತಿಕೋಟಾ ಪಟ್ಟಣದಲ್ಲಿ ಆಹ್ವಾನಿಸಲಾಗುತ್ತಿದೆ.ಇದರಿಂದ ರೈತರಿಗೆ ಇನ್ನೂ ಹೆಚ್ಚಿನ ಲಾಭ ಬರಲಿದೆ. ಹೀಗಾಗಿ ಆಸಕ್ತ ರೈತರು ತಿಕೋಟಾ ಪಟ್ಟಣದಲ್ಲಿ ನಡೆಯುವ ಕ್ಷೇತ್ರ ವೀಕ್ಷಣೆ ಹಾಗೂ ದ್ರಾಕ್ಷಿ ಬೆಳೆಗಾರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.