ಕ್ಷೇತ್ರವಾರು ಆರೋಗ್ಯಕ್ಕೆ  ಒತ್ತು  : ಶಾಸಕ ಡಾ ಶ್ರೀನಿವಾಸ.
ಕೂಡ್ಲಿಗಿ. ಜು 31 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರವಾರು ಶಿಕ್ಷಣ, ಸ್ವಚ್ಛತೆ, ಪರಿಸರ ಉತ್ತಮ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಕ್ಷೇತ್ರವಾರು ಆರೋಗ್ಯಕರ ಸಮಾಜನಿರ್ಮಾಣಕ್ಕೆ ಶ್ರಮಿಸುವೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಎನ್ ಟಿ ತಿಳಿಸಿದರು.
ಅವರು ಮಂಗಳವಾರ ತಾಲೂಕಿನ  ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ 2023-24 ನೇ ಸಾಲಿನಲ್ಲಿ ಮಹತ್ವಾಕಾಂಕ್ಷಿ ತಾಲೂಕುಗಳ  ಅಭಿವೃದ್ಧಿ ಯೋಜನೆ ಅಡಿಯಲ್ಲಿ “ಸಮುದಾಯ ಆರೋಗ್ಯ ಕೇಂದ್ರದ ದುರಸ್ಥಿಯ ಕಾರ್ಯಕ್ಕೆ  ಭೂಮಿಪೂಜೆ ನೆರವೇರಿಸಿ ಮಾತನಾಡುತ್ತ ಚಿಕ್ಕಜೋಗಿಹಳ್ಳಿ ಹಾಗೂ ಗುಡೇಕೋಟೆಯಂತಹ ಪ್ರದೇಶದಲ್ಲಿರುವ ಆಸ್ಪತ್ರೆಗಳಿಗೆ ಹೆಚ್ಚಾಗಿ ಮೂಲೆಕಟ್ಟಿನ ಗ್ರಾಮೀಣ ಭಾಗದ ಬಡ ಜನತೆಯೇ ಹೆಚ್ಚಾಗಿ ಬರುತ್ತಾರೆ ಅವರ ಆರೋಗ್ಯ ಕಾಳಜಿಗೆ ಹೆಚ್ಚು ಒತ್ತು ನೀಡಬೇಕಾಗಿದ್ದು  ಎಂದು ತಿಳಿಸುತ್ತಾ ತಮ್ಮ ಬಾಲ್ಯದ ದಿನದಲ್ಲಿ ಜ್ವರ ಬಂದರೆ ಈ ಚಿಕ್ಕಜೋಗಿಹಳ್ಳಿ ಆಸ್ಪತ್ರೆ ಬಂದು ಚಿಕಿತ್ಸೆ ಪಡೆದುಕೊಂಡು ಹೋಗಿರುವ ನೆನಪನ್ನು ಮಾಡಿಕೊಂಡ ಶಾಸಕರು  ನಮಗೆ ಈ ಆಸ್ಪತ್ರೆ  ಸಂಜೀವಿನಿಯಂತೆ ಇತ್ತು ಎಂದು ನೆನಪಿಸಿಕೊಂಡು ಇಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿ ಬಡ ಜನತೆಯ ಆರೋಗ್ಯದ ಕಡೆ ಗಮನಹರಿಸಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಕಿವಿಮಾತು ಹೇಳಿದರು.
 ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳು, ಆಸ್ಪತ್ರೆ ವೈದ್ಯರು ಹಾಗೂ  ಸಿಬ್ಬಂದಿ, ಗುತ್ತಿಗೆದಾರರು, ಮುಖಂಡರು ಇತರರಿದ್ದರು.