ವಚನಗಳು ಬಾಳಿಗೆ ಬೆಳಕು – ಕುಂ. ಭುವನೇಶ್ವರ ಮೋಕ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು,31- ಕತ್ತಲಲ್ಲಿ ನಡೆಯುವವನಿಗೆ ಕೈ ದೀವಿಗೆಯು ಬೆಳಕು ಬೀರಿ ಸನ್ಮಾರ್ಗ ತೋರುವಂತೆ, ಬದುಕಿನಲ್ಲಿ ಅಜ್ಞಾನದ ಅಂಧಕಾರ ಮುಸುಕಿದಾಗ ಮುನ್ನಡೆಯಲು, ಸರಿ ದಾರಿ ತೋರಲು ಇತರರ ಮಾರ್ಗದರ್ಶನ ಬಹಳ ಮುಖ್ಯ. ಸರಿ ದಾರಿಯಲ್ಲಿ ನಡೆದು ಬದುಕಿನ ಸಾರ್ಥಕತೆಯನ್ನು ಕಂಡು, ಲೋಕಕ್ಕೆ ಸಾರಿದವರು ಶರಣರು. ಶರಣರ ಸಾರ್ಥಕ ಬದುಕಿನ ಕಿರಣಗಳೇ ವಚನಗಳು. ವಚನಗಳು ಮನುಕುಲದ ಬೆಳಕಾಗಿ ಇಂದಿಗೂ ಮಾರ್ಗದರ್ಶಿಗಳು ಆಗಿವೆ ಎಂದು ಮೋಕಾದ ಕತೆಗಾರ ಕುಂಬಾರ ಭುವನೇಶ್ವರರು ನುಡಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಕದಳಿ ಮಹಿಳಾ ವೇದಿಕೆ ಸಂಯುಕ್ರಾಶ್ರಯದಲ್ಲಿ ಗುಗ್ಗರಹಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ೩೦೧ನೇ ಮಹಾಮನೆ ಲಿಂ|| ಬಸಯ್ಯ ವೀರಭದ್ರಯ್ಯ ಹೊಸೂರುಮಠ ಮತ್ತು ಲಿಂ|| ಕೊಟ್ರಯ್ಯ ವೀರಭದ್ರಯ್ಯ ಹೊಸೂರುಮಠ ದತ್ತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಶರಣರ ವಚನಗಳು ಕೇವಲ ಸಾಹಿತ್ಯಿಕ ರಚನೆಗಳಲ್ಲ. ಸ್ವತ ಬಾಳಿ, ಬದುಕಿನಲ್ಲಿ ಕಂಡುಂಡ ಅನುಭಾವದ ಮುಕ್ತಕಗಳೆಂದು ಭುವನೇಶ್ವರರು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗುಗ್ಗರಹಟ್ಟಿಯ ರಾಯಲ್ ಫುಡ್ ಪ್ರಾಡಕ್ಟ್÷್ಸ ನ ಮಾಲೀಕರಾದ ಎಂ.ನಾಗರಾಜ ರವರು ಜೀವನದಲ್ಲಿ ಪ್ರಗತಿ ಹೊಂದಲು ಪರಿಶ್ರಮ, ಶ್ರದ್ಧೆ, ಸಮರ್ಪಣೆಗಳು ಮಹತ್ವವಾಗಿವೆ. ಇವುಗಳನ್ನು ಹೊಂದಿ ಶ್ರೇಷ್ಠ ಸಾಧನೆಯೊಂದಿಗೆ ಅಜರಾಮರರಾಗಿರುವವರು  ಹನ್ನೆರಡನೇ ಶತಮಾನದ ಶರಣರು. ಸಕಲ ಸೌಲತ್ತುಗಳಿದ್ದರೂ ಅಸಂತೃಪ್ತಿಯಿಂದಿರುವ ನಾವು ಶರಣ ಮಾರ್ಗದಲ್ಲಿ ನಡೆಯಬೇಕೆಂದರು.
 ಅತಿಥಿಗಳಾಗಿ ಭಾಗವಹಿಸಿದ್ದ ಶಾಲಾ ಸುಧಾರಣಾ ಸಮಿತಿಯ ಮಾಜಿ ಅಧ್ಯಕ್ಷರಾದ ಪುರುಷೋತ್ತಮ, ನಿವೃತ್ತ ಶಿಕ್ಷಕ ಕಾಂತರಾಜ್, ದೈಹಿಕ ಶಿಕ್ಷಕ ಮಂಜುನಾಥ ರವರು ವಿದ್ಯಾರ್ಥಿಗಳಿಗೆ ಸನ್ನಡತೆಯ ಬಗ್ಗೆ ತಿಳಿಸಿದರು.
ಮುಖ್ಯ ಗುರುಗಳಾದ ಹೆಚ್.ಕೆ.ತಿಪ್ಪೇಸ್ವಾಮಿ ಯವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಜ್ಞಾನೇಶ್ವರಿ ಪ್ರಾರ್ಥನೆ ಮಾಡಿದರು. ನಿರ್ಮಲಾ ರವರು ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿ ಪರಿಚಯಿಸಿದರು. ಅತಿಥಿಗಳಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಶಿಕ್ಷಕಿ ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.