ಜಿಲ್ಲಾ ಮಟ್ಟದ ಸಭೆ
ಧಾರವಾಡ, ಜು.೩೧: ಕಳೆದ ಒಂದು ತಿಂಗಳಿಂದ ಅನಧಿಕೃತ ರಜೆ ಉಳಿದಿರುವ ಮತ್ತು ಅತಿವೃಷ್ಟಿ ಸಮಯದಲ್ಲೂ ಸ್ಪಂದಿಸದಿರುವ ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯತ ಪಿಡಿಓ ನಾಗರಾಜ ಗಿಣಿವಾಲ ಅವರನ್ನು ಅಮಾನತು ಮಾಡಲು ತಕ್ಷಣ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಆದೇಶಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ೨೦೨೪ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಪರಿಹಾರಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಸಭೆ ಜರುಗಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ. ಮನೆಗಳು ಹಾನಿಯಾಗಿ ಆಶ್ರಯದ ತೊಂದರೆ ಆಗಿದೆ. ಜನ ಜೀವನ ಅಸ್ತವ್ಯಸ್ತವಾಗುವ ಸಮಯದಲ್ಲಿ ಸ್ಥಳೀಯ ಅಧಿಕಾರಿಗಳು ಖುದ್ದು ಹಾಜರಿದ್ದು, ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಇಂತಹ ಸಮಯದಲ್ಲಿ ಸಂಬಂಧಿಸಿದ ಅಧಿಕಾರಿಗಳು ರಜೆ, ಬೇಜವಾಬ್ದಾರಿತನ, ಕರ್ತವ್ಯ ಲೋಪ ತೊರಿದರೆ ಸರಕಾರ ಸುಮ್ಮನಿರುವದಿಲ್ಲ ಎಂದು ಸಚಿವರು ತಿಳಿಸಿದರು.
ಜೂನ್, ಜುಲೈ ತಿಂಗಳ ಮಳೆಯಿಂದ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ಆಗಸ್ಟ್ ತಿಂಗಳಲ್ಲೂ ಅತಿ ಮಳೆ ಆಗುವ ಮುನ್ಸೂಚನೆ ಇದೆ. ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗಿನ ಪ್ರತಿ ಅಧಿಕಾರಿ ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕು. ತಹಶೀಲ್ದಾರ ಮತ್ತು ಇಓಗಳು ಜಂಟಿಯಾಗಿ ತಾಲೂಕು ಸುತ್ತಬೇಕು. ಜನರಲ್ಲಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಚಿವರು ತಿಳಿಸಿದರು.
ಹಳೆಯ, ಕಚ್ಚಾ, ಸೋರುವ ಮನೆಗಳ ಸಮೀಕ್ಷೆ ಮಾಡಿ:* ಪ್ರತಿ ಗ್ರಾಮ ಮತ್ತು ನಗರದ ವಾರ್ಡಗಳಲ್ಲಿ ಸಂಬಂಧಿಸಿದ ಸ್ಥಳೀಯ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ, ಹಳೆಯದಾದ, ಕಚ್ಚಾ ಮತ್ತು ಸೋರುತ್ತಿರುವ ಮನೆಗಳ ಸಮೀಕ್ಷೆ ಮಾಡಿ, ಅಲ್ಲಿ ವಾಸವಿರುವ ಕುಟುಂಬಗಳಿಗೆ ಮುನ್ನೆಚ್ಚರಿಕೆ ನೀಡಬೇಕು. ಅಗತ್ಯವಿದ್ದಲ್ಲಿ ಸಮುದಾಯಭವನ ಅಥವಾ ಇತರ ಕಟ್ಟಡಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚಿನ ಸಮಸ್ಯೆ ಇದ್ದಲ್ಲಿ ಕಾಳಜಿ ಕೇಂದ್ರ ತೆರೆದು ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸಚಿವರು ನಿರ್ದೇಶಿಸಿದರು.
ಬಸ್ ಸಂಚಾರ, ರಸ್ತೆ, ಸೇತುವೆ ಗಮನಿಸಿ:* ರಸ್ತೆ ಹಾಗೂ ಸೇತುವೆಗಳ ಬಗ್ಗೆ ಲೋಕೋಪಯೋಗಿ, ಪಂಚಾಯಾತರಾಜ್ ಇಂಜನಿಯರಿಂಗ್ ಇಲಾಖೆಗಳು ಹೆಚ್ಚು ಗಮನ ಹರಿಸಬೇಕು. ರಸ್ತೆ ಹಾಳಾಗಿ ಅಥವಾ ಸೇತುವೆ ಶೀಥಿಲವಾಗಿ ಜನರ ಸಂಚಾರಕ್ಕೆ, ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ನಿಗಾವಹಿಸಬೇಕು. ಸಮಸ್ಯೆ ಕಂಡುಬಂದಲ್ಲಿ ಲಭ್ಯ ಅನುದಾನ ಬಳಸಿ, ತಕ್ಷಣ ಸಮಸ್ಯೆ ಪರಿಹರಿಸಿ ಎಂದು ಸಚಿವರು ತಿಳಿಸಿದರು.
ಅರಣ್ಯವಾಸಿಗಳಿಗೆ ಪಟ್ಟಾ ನೀಡಿ:* ಅನೇಕ ವರ್ಷಗಳಿಂದ ಅರಣ್ಯ ಇಲಾಖೆ ವ್ಯಾಪ್ತಿಯ ಭೂಮಿಯಲ್ಲಿ ಬದುಕುತ್ತಿರುವ ಜನರಿಗೆ, ಅವರ ವಾಸದ ಮನೆಯ ಪಟ್ಟಾ ನೀಡಬೇಕು. ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿಬೇಕು. ಈ ಕುರಿತು ಈಗಾಗಲೇ ಸಮೀಕ್ಷೆ ಮಾಡಿ ವರದಿ ಸಿದ್ಧಪಡಿಸಲಾಗಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.