ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ
ಹುಬ್ಬಳ್ಳಿ, ಜು. ೩೧: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಭಾವಿಕವಾಗಿ ಕೆಲ ಘಟನೆಗಳು ನಡೆಯುತ್ತಿರುತ್ತವೆ. ಕೊಲೆ, ಕಳ್ಳತನ ನಡೆದಿವೆ. ಡ್ರಗ್ಸ್ ದಂಧೆ ಇದೆ, ಆದರೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಮುಖ್ಯ ಎಂದರು.
ಇದೆಲ್ಲ ನಾವು ಅಧಿಕಾರಕ್ಕೆ ಬಂದ ಮೇಲೆ ಆಗಿದೆಯಾ? ಬಿಜೆಪಿ ಅಧಿಕಾರದಲ್ಲಿ ಕಡಿಮೆ ಕೊಲೆ, ಕಳ್ಳತನ ನಡೆದಿವೆಯೇ ಎಂದು ಅವರು ಪ್ರಶ್ನಿಸಿದರು.
ಡ್ರಗ್ಸ್ ದಂಧೆ ನಿಲ್ಲಿಸುವ ದೊಡ್ಡ ಆಂದೋಲನ ಆರಂಭ ಮಾಡಿದ್ದೇವೆ. ಸಾವಿರಾರು ಕೋಟಿ ರೂಪಾಯಿ ಡ್ರಗ್ಸ್ ವಶಕ್ಕೆ ಪಡೆದು ಸುಟ್ಟು ಹಾಕಿದ್ದೇವೆ. ಡ್ರಗ್ಸ್ ಹಾವಳಿ ಮೊದಲಿಗಿಂತ ಕಡಿಮೆ ಆಗಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದೇವೆ. ಹುಬ್ಬಳ್ಳಿಯಲ್ಲೂ ನೂರಾರು ಜನರ ಮೇಲೆ ಕ್ರಮ ಆಗಿದೆ ಎಂದವರು ನುಡಿದರು.
ಸೈಬರ್ ಕ್ರೆöÊಂ ತಡೆಗಟ್ಟಲು ಕ್ರಮ ತೆಗೆದುಕೊಂಡಿದ್ದೇವೆ. ಸೈಬರ್ ಕ್ರೆöÊಂ ಪೊಲೀಸ್ ಠಾಣೆಗಳನ್ನು ಹೆಚ್ಚು ಮಾಡಿದ್ದೇವೆ. ಸಾವಿರಾರು ಜನರಿಗೆ ಹಣ ಮರಳಿ ಕೊಡಿಸಿದ್ದೇವೆ ಎಂದರು.
ಎಸ್‌ಸಿ,ಎಸ್‌ಟಿ ಹಣ ಡೈವರ್ಟ್ ಮಾಡಿದ್ದಾರೆ ಎನ್ನುವ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸುತ್ತ, ನಿಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ನೋಡಿಕೋಳ್ಳಬೇಕು. ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳುವುದಲ್ಲ ಎಂದು ತಿರುಗೇಟು ನೀಡಿ, ನಾವು ಹಣ ಡೈವರ್ಟ್ ಮಾಡಿಲ್ಲ. ಕಾರ್ಯಕ್ರಮಕ್ಕೆ ಹಣ ಉಪಯೋಗ ಮಾಡಿದ್ದೇವೆ ಎಂದರು.
ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತ, ಈ ಬಗ್ಗೆ ಪರೀಕ್ಷೆ ಮಾಡಿದ್ದು, ಅದು ನಾಯಿ ಮಾಂಸ ಅಲ್ಲ. ಅಲ್ಲಿ ಹೋಗಿ ಕೆಲವರು ಗಲಾಟೆ ಮಾಡಿದ್ದಾರೆ. ಶಾಂತಿ ಭಂಗ ಮಾಡಿದ್ದಾರೆ. ಅವರ ಮೇಲೆ ಕ್ರಮ ಆಗಿದೆ ಎಂದರು.
ಮುಡಾ ಹಗರಣ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ಸಿಎಂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಪ್ರಕರಣ ತನಿಖೆಗೆ ರಚಿತ ಸಮಿತಿಯ ವರದಿ ಬರಲಿ. ತಪ್ಪಿತಸ್ಥರಿದ್ದರೆ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಸಿಎಂ ಬದಲಾವಣೆ:
ಸಿಎಂ ಬದಲಾವಣೆ ವಿಷಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಸದ್ಯ ಅಂತಹ ವಾತಾವರಣ ಇಲ್ಲ ಎಂದ ಪರಮೇಶ್ವರ, ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಕುರಿತು ಪ್ರತಿಕ್ರಿಯಿಸುತ್ತ, ನಾವೇನು ಸನ್ಯಾಸಿಗಳಾ ? ಎಂದು ಮರು ಪ್ರಶ್ನಿಸಿದರು.