ವಿಶ್ವಪರಿಸರ ದಿನಾಚರಣೆ
ಬ್ಯಾಡಗಿ,ಜು.೩೧: ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಗಿಡ ಮರ, ನೆಲ ಜಲ, ಪರಿಸರ ಹಾಗೂ ಪ್ರಕೃತಿಯ ಮೇಲೆ ಪ್ರೇಮ ಮೂಡಿಸಿದರೆ ಭವಿಷ್ಯದಲ್ಲಿ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕಾಧ್ಯಕ್ಷ ವಿಶ್ವನಾಥ ಅಂಕಲಕೋಟಿ ಹೇಳಿದರು.
ಪಟ್ಟಣದ ಎಸ್.ಎಸ್.ಪಿ.ಎನ್. ಗರ್ಲ್ಸ್ ಹೈಸ್ಕೂಲಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕಿದೆ ಎಂದು ತಿಳಿಸಿದರು.
ಶಾಲಾ ಸಂಸ್ಥೆಯ ಅಧ್ಯಕ್ಷರಾದ ಪುರಸಭೆ ಸದಸ್ಯ ಚಂದ್ರಪ್ಪ ಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳು ಶಾಲಾ ಪರಿಸರದಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ನೆಲ ಜಲ ಸಂರಕ್ಷಣೆ, ಜೀವ ವೈವಿಧ್ಯ ಹಾಗೂ ನೀರಿನ ಸಂರಕ್ಷಣೆಯಂತಹ ಪರಿಸರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ದಿಶೆಯಲ್ಲಿ ಪರಿಸರ ಚಟುವಟಿಕೆಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಪಿ.ಟಿ.ಲಕ್ಕಣ್ಣವರ, ಕೆ.ಜಿ. ಖಂಡೇಬಾಗೂರ, ವಿ.ವಿ.ಗೊಡಚಿ, ಮಹೇಶ್ವರಿ ಪಸಾರದ, ಉಮಾ ಮಠದ, ಉಮಾ ಶಿರಗಂಬಿ, ಅಣ್ಣಪ್ಪ ಪೀಠದ. ಎಸ್.ಎಲ್.ತೆಂಬದ, ಮಹಾಂತೇಶ ಆಲದಗೇರಿ, ರಮೇಶ ಮೋಟೆಬೆನ್ನೂರ, ಶಂಭು ಮಠದ. ವಿ.ವಿ.ಹುಣಸಿಕಟ್ಟಿ, ಸುಭಾಸ ಎಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.