ಅಧಿಕಾರಿಗಳ ನಿರ್ಲಕ್ಷ, ನಿರ್ದಾಕ್ಷಿಣ್ಯ ಕ್ರಮ-ಎಚ್ಚರಿಕೆ
ಬೈಲಹೊಂಗಲ,ಜು೩೧: ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನಲ್ಲಿ ಮಳೆಯಿಂದ ಹಾನಿಗೆ ಒಳಗಾದ ಮನೆಗಳ ಸಮೀಕ್ಷೆ ನಡೆಸಿ ಸ್ಪಷ್ಟ ವರದಿ ನೀಡದಿದ್ದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಜಂಟಿಯಾಗಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ,
ಬೈಲಹೊಂಗಲ, ಕಿತ್ತೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಯಿಂದಾಗಿ ೧೧೬ ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು, ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜವಾಬ್ದಾರಿ ವಹಿಸಲಾಗಿದೆ.
ಎಂಜಿನಿಯರ್, ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿ ಪಡೆಯಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಂಗನವಾಡಿಗಳು ಶಿಥಿಲಾವಸ್ಥೆಯಲ್ಲಿ ಇರುವುದು ಕಂಡು ಬಂದಲ್ಲಿ ಪ್ರಾಥಮಿಕ ಶಾಲೆಗಳನ್ನು ಉಪಯೋಗಿಸಬಹುದು ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಜಿಪಂ ಲೆಕ್ಕ ಪರಿಶೋಧಕಿ ಗಂಗಾ ಹಿರೇಮಠ, ತಹಶೀಲ್ದಾರ ಹನಮಂತ ಶಿರಹಟ್ಟಿ, ತಾಪಂ ಇಓ ಸುಭಾಷ್ ಸಂಪಗಾವಿ, ಕೆ.ಜಿ.ಘೋರ್ಪಡೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.