ದೊಡ್ಡ ಬೆಕ್ಕುಗಳ ಸಂರಕ್ಷಣೆಯೇ ಜೀವವೈವಿಧ್ಯತೆ ಉಳಿವು
ಸಂಜೆವಾಣಿ ನ್ಯೂಸ್
ಮೈಸೂರು: ಜು.೩೧:- ಹುಲಿ, ಚಿರತೆ ಸೇರಿದಂತೆ ದೊಡ್ಡ ಬೆಕ್ಕುಗಳ ಸಂರಕ್ಷಣೆಯೇ ಭೂಮಿಯ ಜೀವವೈವಿಧ್ಯತೆಯ ಉಳಿವಾಗಿದೆ ಎಂದು ಅಂತರರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟದ (ಐಬಿಸಿಎ) ಯೋಜನಾ ನಿರ್ದೇಶಕ ಸೌಮಿತ್ರ ದಾಸ್‌ಗುಪ್ತ ಪ್ರತಿಪಾದಿಸಿದರು.
ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ವಿಶ್ವ ಹುಲಿ ದಿನದ ಪ್ರಯುಕ್ತ ಮಂಗಳವಾರ ದೊಡ್ಡ ಬೆಕ್ಕುಗಳ ಸಂರಕ್ಷಣೆಗೆ ಪರಿಣಾಮಕಾರಿ ಕ್ರಮಗಳು ಕುರಿತು ನಡೆದ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿ, ದೊಡ್ಡಬೆಕ್ಕುಗಳಿರುವ ಅರಣ್ಯ ಸಸ್ಯ ಹಾಗೂ ಪ್ರಾಣಿ ಸಂಪತ್ತಿನಿಂದ ಸಮೃದ್ಧವಾಗಿರುತ್ತದೆ ಎಂದರು.
ದೇಶದ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಚೀತಾ, ದಕ್ಷಿಣ ಅಮೆರಿಕದ ಜಾಗ್ವಾರ್, ಉತ್ತರ ಅಮರಿಕದ ಪುಮಾ ಉಳಿಸಲು ಅಂತರರಾಷ್ಟ್ರೀಯ ದೊಡ್ಡ ಬೆಕ್ಕುಗಳ ಒಕ್ಕೂಟ ರಚನೆಯಾಗಿದ್ದು, ೨೧ ದೇಶಗಳು ಈಗಾಗಲೇ ಸಂರಕ್ಷಣೆ, ನೀತಿಗಳ ಅನುಷ್ಠಾನಕ್ಕೆ ಸಹಿ ಹಾಕಿವೆ ಎಂದು ತಿಳಿಸಿದರು.
ಹುಲಿ ಸೇರಿದಂತೆ ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸರ್ಕಾರದ ನೀತಿಗಳು ಪ್ರಮುಖ ಪಾತ್ರ ವಹಿಸಿವೆ. ದೇಶದ ಶೇ.೭೦ರಷ್ಟು ಅರಣ್ಯ ಪ್ರದೇಶ ಇದೀಗ ದೊಡ್ಡ ಬೆಕ್ಕುಗಳ ಆವಾಸ ಸ್ಥಾನವಾಗಿವೆ. ವನ್ಯ ಸಂಪತ್ತನ್ನು ರಕ್ಷಿಸಿದರೆ, ಮುಂದಿನ ಪೀಳಿಗೆ ನಿತ್ಯ ಸ್ಮರಿಸಲಿದೆ ಎಂದು ಹೇಳಿದರು.
ಜಾಗತಿಕ ತಾಪಮಾನ ಏರಿಕೆ ಅಂದಾಜಿಸಲು ಮೊದಲು ವಿಫಲರಾದೆವು. ಈಗ ಎಲ್ಲೆಡೆ ಮಾತನಾಡುವಂತಾಗಿದೆ. ತಾಪಮಾನ ತಗ್ಗಿಸುವ ಪ್ರಯತ್ನಗಳನ್ನು ತೀವ್ರಗೊಳಿಸದಿದ್ದರೆ ೧೦೦ ವರ್ಷಗಳಲ್ಲಿ ವನ್ಯ ಸಂಪತ್ತು ಇಲ್ಲವಾಗಲಿದೆ. ಅದರ ಜತೆಗೆ ಜೀವನವೂ ಸವಾಲಾಗಲಿದೆ ಎಂದರು.
ಸಂಖ್ಯೆ ಹೆಚ್ಚಳ: ಸಮುದಾಯದ ನೆರವು:
ಭಾರತ ಜೀವವೈವಿಧ್ಯದ ಆಗರವಾಗಿದ್ದು, ಅಳಿವಿನಂಚಿನ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ಆನೆ, ಘೇಂಡಾಮೃಗಗಳ ಸಂಖ್ಯೆ ಹೆಚ್ಚಳವಾಗಿದೆ. ಅರಣ್ಯ ಇಲಾಖೆಯಷ್ಟೇ ದೇಶದ ಎಲ್ಲ ಸಮುದಾಯಗಳು ಇವುಗಳ ಸಂರಕ್ಷಣೆಯಲ್ಲಿ ನೆರವಾಗಿವೆ ಎಂದು ಸೌಮಿತ್ರ ದಾಸ್‌ಗುಪ್ತ ಅಭಿಪ್ರಾಯಪಟ್ಟರು.
ವನ್ಯಜೀವಿಗಳ ಘರ್ಜನೆ ಗಟ್ಟಿಯಾಗಿ ಕೇಳಿಸಲು ಸರ್ಕಾರದ ಜತೆಗೆ ಸರ್ಕಾರೇತರ ಸಂಸ್ಥೆಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ. ದೇಶದ ಅರಣ್ಯದಲ್ಲಿ ವನ್ಯಜೀವಿಗಳ ಸಾಂದ್ರತೆ ಹೆಚ್ಚಳ ಪರಿಣಾಮ ಮಾನವ ವನ್ಯಜೀವಿ ಸಂಘರ್ಷ ತೀವ್ರವಾಗಿದೆ. ಅದನ್ನು ಪರಿಹರಿಸಲು ಸಾಂಘಿಕ ಸಹಭಾಗಿತ್ವ ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ವೈಲ್ಡ್ ಕ್ಯಾಟ್ಸ್ ಆಫ್ ಇಂಡಿಯಾ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಮನೋವಿಜ್ಞಾನಿ ಡಾ.ಮೇವಾ ಸಿಂಗ್, ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ವಿಜ್ಞಾನಿ ಡಾ.ಖಮರ್ ಖುರೇಷಿ, ಮೃಗಾಲಯದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಪನ್ವಾರ್, ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್ ಕುಮಾರ್ ಹಾಜರಿದ್ದರು.