ನೂತನ ಎಸ್ಪಿ ಅವರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸ್ವಾಗತ
ಕೋಲಾರ,ಜು,೩೧- ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಒತ್ತಡಗಳಿಗೆ ಹೆದರದೇ ಬದ್ದತೆಯಿಂದ ಕಾರ್ಯನಿರ್ವಹಿಸಲು ಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭರವಸೆ ನೀಡಿದರು.
ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಅವರನ್ನು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ ಬಾಬು ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ನೀಡಿದ ಆತ್ಮೀಯ ಸನ್ಮಾನ ಸ್ವಾಗತ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ನೌಕರರ ಜನರ ಸೇವಕರು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಹೊಣೆ ಇದೆ, ಇದನ್ನು ಅರಿತು ನೀವು ಜನರ ಕೆಲಸವನ್ನು ನಿಯಮಾನುಸಾರ ಇದ್ದರೆ ಕೂಡಲೇ ಮಾಡಿಕೊಡಿ, ಅನಗತ್ಯ ವಿಳಂಬ ಮಾಡದಿರಿ ಎಂದು ಕಿವಿಮಾತು ಹೇಳಿಮ ರಚನಾತ್ಮಕ ಚಟುವಟಿಕೆಗಳಿಗೆ ನನ್ನನ್ನು ಕರೆಯಿರಿ ಸದಾ ನಿಮ್ಮೊಂದಿಗೆ ಇರುವೆ ಎಂದರು.
ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಮಾಡಲು ಜನರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಇಲಾಖೆಯೊಂದಿಗೆ ಸರ್ಕಾರಿ ನೌಕರರು ಸಹಕಾರ ನೀಡಿ, ಜನರಿಗೆ ನೆಮ್ಮದಿ ನೀಡುವ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸೋಣ, ಸಮಾಜ ವಿದ್ರೋಹಿ ಶಕ್ತಿಗಳು ಮಿಸುಕಾಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸರ್ಕಾರಿನೌಕರರು ಅತ್ಯುತ್ತಮ ಕಾರ್ಯ ನಿರ್ವಹಿಸಿದ ಕುರಿತು ತಿಳಿದಿದ್ದೇನೆ, ನಾನೂ ಒಬ್ಬ ಸರ್ಕಾರಿ ನೌಕರನಾಗಿ ಎಲ್ಲಾ ನೌಕರರಿಗೂ ಧನ್ಯವಾದ ಸಲ್ಲಿಸುವೆ ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಸರ್ಕಾರಿ ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸಬೇಕಾಗಿದೆ, ಸಾಕಷ್ಟು ಹುದ್ದೆಗಳು ಖಾಲಿ ಇದೆ, ಇದರ ನಡುವೆಯೂ ನಾವು ಕೆಲಸ ಮಾಡುತ್ತಿದ್ದು, ಕೆಲವು ಸಂದರ್ಭದಲ್ಲಿ ಒತ್ತಡ, ಬ್ಲಾಕ್ ಮೇಲ್ ತಂತ್ರಕ್ಕೆ ಒಳಗಾಗುತ್ತಿದ್ದೇವೆ, ಇದರ ನಿವಾರಣೆಗೆ ಪೊಲೀಸ್ ಇಲಾಖೆ ಸಹಕಾರ ಬೇಕು ಎಂದರು.
ಜಿಲ್ಲಾ ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರುಗಳಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ಹಾಲಿ ಹಿರಿಯ ಉಪಾಧ್ಯಕ್ಷರಾದ ಸುಬ್ರಮಣಿ,ಸಂಘದ ಜಂಟಿ ಕಾರ್ಯದರ್ಶಿ ವಿಜಯಮ್ಮ, ಆರೋಗ್ಯ ಇಲಾಖೆಯ ಶಿವಾರೆಡ್ಡಿ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಎಸ್ಪಿಯವರ ಆಪ್ತಸಹಾಯಕ ಡಿ.ಎಂ.ನಾಗರಾಜ್, ಸರ್ವೇ ಇಲಾಖೆಯ ಸುಭಾಷ್, ರವಿ, ಸಂದೀಪ್ ಕುಮಾರ್, ವಿಜಿ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.