ಸಾಧಿಸುವ ಛಲ ನಿಮ್ಮಲ್ಲಿರಲಿ- ಬಿ.ಪಿ.ಸಂಜಿವರಾಜು
ಕೋಲಾರ,ಜು.೩೧-ಕೋಲಾರ ಜಿಲ್ಲಾ ಕುಂಬಾರರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಹಾಗೂ ಕೋಲಾರ ಜಿಲ್ಲಾ ಕುಂಬಾರರ ಸಂಘದ ಸಹಯೋಗದಲ್ಲಿ ನಗರದ ಕೆ.ಇ.ಬಿ ಸಮುದಾಯ ಭವನದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಂಬಾರ ಜನಾಂಗದ ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಧೀಕ್ಷಕ ಅಭಿಯಂತರ ಬಿ.ಪಿ.ಸಂಜಿವರಾಜು ಕಾರ್ಯಕ್ರಮವನ್ನು ಉದ್ಘಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ಸಮುದಾಯಕ್ಕೆ ತಮ್ಮ ಕೈಲಾದ ಕೊಡುಗೆ ನೀಡಬೇಕೆಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಕಲಿಯಬೇಕೆಂಬ ಛಲ, ಹಂಬಲ ಇದ್ದರೆ ತಾವು ಅಂದುಕೊಂಡಿದ್ದನ್ನು ಸಾಧಿಸಲು ಯಾವುದೇ ತೊಂದರೆ, ಅಡ್ಡಿ ಆತಂಕ ಎದುರಾಗುವುದಿಲ್ಲ. ಸಾಧಿಸುವ ಛಲ ಇದ್ದರೆ ಅದುವೇ ನಿಮ್ಮ ಸಾಧನೆಯಾಗುತ್ತದೆ ಎಂದರು.
ಕೋಲಾರ ಜಿಲ್ಲಾ ಕುಂಬಾರರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಗೌರವಾಧ್ಯಕ್ಷ ವೆಂಕಟಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಗುರಿ ಇಟ್ಟುಕೊಳ್ಳಬೇಕು. ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಪೂರ್ಣಶ್ರಮವನ್ನು ಹಾಕುವ ಮೂಲಕ ಸಾಧನೆಯ ಹಾದಿಯಲ್ಲಿ ಸಾಗಬೇಕೆಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಕಾರ್ಯಪಾಲಕ ಅಭಿಯಂತರ ಹೆಚ್.ಎಂ.ಟಿ.ಸ್ವಾಮಿ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಕೆ.ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಕಾರ್ಯದರ್ಶಿ ಎಸ್.ನಿರ್ಮಲ, ಕೋಲಾರ ಜಿಲ್ಲಾ ಕುಂಬಾರರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ತಬಲ ನಾರಾಯಣಪ್ಪ, ಖಜಾಂಚಿ ಕಲ್ಲಂಡೂರು ಶ್ರೀನಿವಾಸಪ್ಪ, ಮುಖಂಡರಾದ ಎಸ್.ನಾರಾಯಣಸ್ವಾಮಿ, ಉಪಾಧ್ಯಕ್ಷ ಜಿ.ನಂಜುಂಡಪ್ಪ, ಧರ್ಮದರ್ಶಿ ಕೆ.ವಿ.ಶ್ರೀನಿವಾಸ, ಎಂ.ನಾಗರಾಜಮೂರ್ತಿ, ಜಿ.ಎಂ.ಅಶ್ವಥ್, ಎಂ.ನಾಗೇಶ್, ಶ್ರೀರಾಮಪ್ಪ, ಬಿ.ಎಸ್.ರವಿಚಂದ್ರ, ಕೆ.ಎಂ.ರಮೇಶ್, ಆರ್.ಸುರೇಶ್‌ಬಾಬು ಇನ್ನಿತರರು ಉಪಸ್ಥಿತರಿದ್ದರು.
ಎ.ಎಸ್.ಚಿಕ್ಕರೆಡ್ಡಪ್ಪ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಎನ್.ರೆಡ್ಡಪ್ಪ ನಿರೂಪಿಸಿದರು.