ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕಾದರೆ ಶಿಕ್ಷಣ ಅತ್ಯವಶ್ಯಕ
ಸಂಜೆವಾಣಿ ವಾರ್ತೆ
ನಂಜನಗೂಡು:ಜು.೩೧:- ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತಂದೆ-ತಾಯಿಗಳು ಮೊದಲ ಗುರುವಾಗಿ, ಶಾಲೆಯಲ್ಲಿ ಕಲಿತ ಶಿಕ್ಷಣ ಬೇರೆಯವರಿಗೆ ದಾರಿದೀಪವಾಗುವ ಮೂಲಕ ತಾವು ಕಾರ್ಯೋನ್ಮುಖರಾಗುವುದರ ಜೊತೆಗೆ ಇವತ್ತಿನ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕಾದರೆ ಮೌಲ್ಯಯುತವಾದ ಶಿಕ್ಷಣ ತುಂಬಾ ಅತ್ಯವಶ್ಯಕವಾಗಿದ್ದು, ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಮೈಸೂರು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಮರಿಸ್ವಾಮಿ ಕರೆ ನೀಡಿದರು.
ಅವರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಉತ್ತುಂಗ ಸಭಾಂಗಣದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳಿಲ್ಲದ ಸಂದರ್ಭದಲ್ಲಿ ಇಲ್ಲಿನ ಪ್ರಾಚಾರ್ಯರು, ಕಾಲೇಜು ಅಭಿವೃದ್ದಿ ಸಮಿತಿ, ಉಪನ್ಯಾಸ ವರ್ಗದವರು, ಕೊಡುಗೈ ದಾನಿಗಳ ಮೂಲಕ ಶರವೇಗದಲ್ಲಿ ಕಾಲೇಜಿನ ಅಭಿವೃದ್ದಿಗೆ ಸ್ಪಂಧಿಸಿರುವುದು ಶ್ಲಾಘನೀಯವಾದ ಕೆಲಸ ಎಂದರು.
ಇಲಾಖೆಯಿಂದ ನೀಡುವ ಅನುದಾನ ಬಹಳ ಕಡಿಮೆಯಿದ್ದು, ಸಮಾಜ ಸುಧಾರಕರು ಈ ರೀತಿ ಕಾಲೇಜಿನ ಅಭಿವೃದ್ದಿಗೆ ಸ್ಪಂಧಿಸುತ್ತಿರುವುದು ಅಭಿನಂದನಾರ್ಹ ಎಂದ ಅವರು ಫಲಿತಾಂಶದಲ್ಲೂ ಇಲ್ಲಿನ ವಿದ್ಯಾರ್ಥಿನಿಯರು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿರುವುದು ಮೆಚ್ಚುಗೆ ಪಡುವಂತಹದ್ದು, ಶಾಸಕ ದರ್ಶನ್ ಧ್ರುವನಾರಾಯಣ್ ರವರು ವಿದ್ಯಾರ್ಥಿಗಳ ಉತ್ತೇಜನಕ್ಕೆ ನಮಗೆ ದೂರವಾಣಿ ಮೂಲಕ ಮಾತನಾಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಸಿಇಟಿ, ಎಇಇ, ಐಐಟಿ ಇಂತಹ ಪ್ರವೇಶಾತಿ ಪರೀಕ್ಷೆಗಳಿಗೆ ತರಬೇತಿ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ನಾವು ಪ್ರಸಕ್ತ ಸಾಲಿನಲ್ಲಿ ಪ್ರವೇಶಾತಿ ತರಬೇತಿಗಳನ್ನು ಪ್ರಾರಂಭಿಸುತ್ತಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ತರಬೇತಿ ಸಂಸ್ಥೆಗಳಿಗೆ ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿದ್ಯಾರ್ಥಿನಿಯರು ಶೈಕ್ಷಣಿಕ ರಂಗದಲ್ಲಿ ಮುಂದೆ ಇರುವುದು ಎಲ್ಲೆಡೆ ಕಂಡುಬಂದಿದ್ದು, ಇದರಿಂದ ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ತುಡಿತ ಹೆಚ್ಚಾಗಿದೆ ಎಂದ ಅವರು ಮಹಿಳೆಯರ ಕೊಡುಗೆ ಸಮಾಜಕ್ಕೆ ಬಹಳ ಮುಖ್ಯವಾದದ್ದು, ಮಹಿಳೆಯರು ಎಲ್ಲಾ ರಂಗದಲ್ಲೂ ಹೆಚ್ಚು ಹೆಚ್ಚು ಭಾಗವಹಿಸುತ್ತಿದ್ದು, ಅವರು ಭಾಗವಹಿಸದ ಕಾರ್ಯಕ್ರಮಗಳು ಬಹಳ ವಿರಳವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಎಂಬುದು ಅತ್ಯಮೂಲ್ಯ ಎಂದ ಅವರು ಒಳ್ಳೆಯ ಶಿಕ್ಷಣ ಒಳ್ಳೆಯ ಸಮಾಜ ಮತ್ತು ನಾಗರೀಕರನ್ನು ನಿರ್ಮಾಣ ಮಾಡಲು ಸಹಾಯವಾಗುತ್ತದೆ ಎಂದರು.
ಸಮಾಜದಲ್ಲಿ ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವಿಸುವ ಸಂಸ್ಕೃತಿ ಕಡಿಮೆಯಾಗಿದ್ದು, ಇದರಿಂದ ಸಮಾಜದ ಅಭಿವೃದ್ದಿ ಕ್ಷೀಣಿಸುತ್ತಿದೆ. ತಂದೆಯ ಶಿಸ್ತು, ತಾಯಿಯ ಸಂಸ್ಕಾರ, ಗುರುವಿನ ಶಿಕ್ಷಣ ಈ ಮೂರನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜೀವನದಲ್ಲಿ ಅಳವಡಿಸಿಕೊಂಡಾಗ ನಿಮ್ಮಗಳ ಅಭಿವೃದ್ದಿ ಸಾಧ್ಯ ಎಂದರು.
ಸಮಾರಂಭದಲ್ಲಿ ಬೆಂಗಳೂರಿನ ಉತ್ತುಂಗ ಸಾಫ್ಟ್‌ವೇರ್ ಕಂಪನಿಯ ಮಾಲೀಕರು ಹಾಗೂ ಈ ಕಾಲೇಜಿಗೆ ಉತ್ತುಂಗ ಸಭಾಂಗಣದ ಮತ್ತು ಶುದ್ದ ಕುಡಿಯುವ ನೀರಿನ ಘಟಕದ ನಿರ್ಮಾತೃ ಕುಂಬ್ರಳ್ಳಿ ಕೃಷ್ಣನ್.ಕೆ.ಎಂ. ರವರು ಮಾತನಾಡುತ್ತಾ ತಮ್ಮ ವಿದ್ಯಾರ್ಥಿ ಜೀವನದ ಮತ್ತು ನಡೆದುಬಂದ ದಾರಿಯ ಬಗ್ಗೆ ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ತಿಳಿಸಿ ಧೃಢಮನಸ್ಸಿನಿಂದ ಯಾವುದೇ ಕಾರ್ಯಗಳನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಾಚಾರ್ಯರಾದ ಎಸ್.ಎನ್.ಚಂದ್ರಶೇಖರಬಾಬು ರವರು ಮಾತನಾಡಿ ನಮ್ಮ ಕಾಲೇಜು ೨೦೨೩-೨೪ ನೇ ಸಾಲಿನ ಫಲಿತಾಂಶದಲ್ಲಿ ೬೧ ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದು ಕಾಲೇಜಿಗೆ ಮತ್ತು ತಾಲ್ಲೂಕಿಗೆ ಪ್ರಥಮ, ಜಿಲ್ಲೆಗೆ ದ್ವಿತೀಯ ಸ್ಥಾನಗಳಿಸಿರುವುದಕ್ಕೆ ಅಭಿನಂದಿಸಿದರು. ಮತ್ತು ಈ ಕಾಲೇಜಿಗೆ ಸಹಾಯ ಹಸ್ತ ನೀಡುತ್ತಿರುವ ದಾನಿಗಳಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕಾಲೇಜಿಗೆ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನ ಸಮಾರಂಭವು ಕೂಡ ಯಶಸ್ವಿಯಾಗಿ ನಡೆಯಿತು.
ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಕುರಟ್ಟಿ ಮಹೇಶ್, ನಿವೃತ್ತ ಉಪನ್ಯಾಸಕ ಹೆಚ್.ರಾಜು, ಉತ್ತುಂಗ ಟೆಕ್ನಾಲಜಿ ಪ್ರೈ.ಲಿ.ನ ವ್ಯವಸ್ಥಾಪಕಿ ಸವಿತಾ, ಶಾಲಾ ಅಭಿವೃದ್ದಿ ಸಮಿತಿಯ ಮಮತ, ದೊರೆಸ್ವಾಮಿ, ರಾಜೇಶ್, ಕೆ.ಪಿ.ನಾಗರಾಜು, ಹೇಮಾವತಿ.ಹೆ.ಎಂ, ಹಿರಿಯ ಉಪನ್ಯಾಸಕ ವಸಂತಕುಮಾರ್, ನಗರಸಭಾ ಸದಸ್ಯರುಗಳಾದ ಹಿರಿಯ ವಕೀಲ ಹಾಗೂ ಉಪನ್ಯಾಸಕ ಮಹೇಶ್ ಅತ್ತಿಖಾನೆ, ಮಂಗಳಮ್ಮ, ಹಿರಿಯ ವಕೀಲ ಮುರಳೀಧರ್, ನಂಜಮ್ಮಣ್ಣಿ ಗುರುಮಲ್ಲಪ್ಪ, ಕಳಲೆ ರಾಚನಾಯಜಕ, ಯುವ ಕಾಂಗ್ರೆಸ್ ಅಧ್ಯಕ್ಷ ದೇಬೂರು ಅಶೋಕ್, ಕಸಾಪ ಅಧ್ಯಕ್ಷೆ ಲತಾ ಮುದ್ದುಮೋಹನ್, ಪ್ರಜ್ವಲ್, ಉಪನ್ಯಾಸಕ ಶಿವಕುಮಾರ್, ಸೇರಿದಂತೆ ಭೋದಕ ವರ್ಗ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.