ಪೌರಕಾರ್ಮಿಕರ ಪಾದ ಪೂಜೆ ಬೂಟಾಟಿಕೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.೩೧:- ಐವರು ಪೌರಕಾರ್ಮಿಕರಿಗೆ ಎರೆಡೆರಡು ಬಾರಿ ಸ್ನಾನ ಮಾಡಿಸಿ ಪಾದ ಪೂಜೆ ಮಾಡುವುದರಿಂದ ದೇಶದ ಪೌರಕಾರ್ಮಿಕರೆಲ್ಲರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಅವರ ಪಾದಪೂಜೆ ಬೂಟಾಟಿಕೆ ಎಂದು ಮಾಜಿ ಮೇಯರ್ ನಾರಾಯಣ್ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿ ಘಟಕದ ನೂತನ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಅಧಿಕಾರ ಸ್ವೀಕಾರ ಮತ್ತು ಪೌರಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಇವತ್ತಿಗೂ ಮಲ ಹೊರುವ ಪದ್ಧತಿ ನಿಂತಿಲ್ಲ. ಮಲಗುಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ. ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ. ಗುತ್ತಿಗೆದಾರರಡಿ ಆಧುನಿಕ ಜೀತ ಪದ್ಧತಿಯಲ್ಲಿ ನರಳುತ್ತಿದ್ದಾರೆ. ಈ ಕಷ್ಟಗಳನ್ನು ಬಗೆಹರಿಸಬೇಕಾದ ಪ್ರಧಾನಿ ಪಾದಪೂಜೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಾದಪೂಜೆ ಮಾಡಿಸಿಕೊಳ್ಳಲು ಪೌರಕಾರ್ಮಿಕರು ಸ್ವಾಮೀಜಿಗಳಲ್ಲ. ಪಾದಪೂಜೆಯಿಂದ ಪೌರಕಾರ್ಮಿಕರ ಹೊಟ್ಟೆ ತುಂಬುವುದಿಲ್ಲ. ಮಕ್ಕಳಿಗೆ ಶಿಕ್ಷಣ ದೊರೆಯುವುದಿಲ್ಲ. ಜಲಗಾರ, ತೋಟಿ, ಚಾಡಮಾಲಿ ನಾನಾ ಹೆಸರಿನಿಂದ ಕರೆಯುತ್ತಿದ್ದ ಜನಾಂಗಕ್ಕೆ ಪೌರಕಾರ್ಮಿಕನೆಂದು ನಾಮಕರಣ ಮಾಡಿದ ಡಿ.ದೇವರಾಜ ಅರಸು ಘನತೆ ತಂದುಕೊಟ್ಟರು. ಬಸವಲಿಂಗಪ್ಪ ಮಲ ಹೊರುವ ಪದ್ಧತಿ ರದ್ದು ಮಾಡಿದರು. ಸಿದ್ದರಾಮಯ್ಯ ಅವರು ಉದ್ಯೋಗ ಕಾಯಂ, ನೇರ ಪಾವತಿ ಮೂಲಕ ಸಂಬಳ, ವಿದೇಶ ಪ್ರವಾಸದಂತಹ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಪೌರಕಾರ್ಮಿಕರ ಸಂಘಟನೆಗಾಗಿ ಸಮಿತಿ ರಚನೆ ಮಾಡಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ ನಾರಾಯಣ ಅವರು, ಸಮಿತಿಗೆ ನೂತನ ಜಿಲ್ಲಾಧ್ಯಕ್ಷ ಎಸ್.ನಾಗರಾಜ್ ನೇಮಕಕ್ಕೆ ವಿರೋಧ ಇತ್ತು. ಬಿಜೆಪಿ, ಜೆಡಿಎಸ್‌ನಲ್ಲಿದ್ದರೆಂದು ಆರೋಪಿಸಿದರು. ಆದರೆ, ನಾಗರಾಜ್ ಕ್ರಿಯಾಶೀಲ ಮನುಷ್ಯ ಎಂದು ನೇಮಕವನ್ನು ಸಮರ್ಥಿಸಿದರು.
ಶಾಸಕ ತನ್ವೀರ್ ಸೇಠ್ ಎಸ್.ನಾಗರಾಜು ಅವರಿಗೆ ಪಕ್ಷದ ಧ್ವಜ ನೀಡಿ ಮಾತನಾಡಿ, ಎಸ್.ನಾಗರಾಜ್ ಅವರು ಜನಾಂಗದ ಸೇವೆ ಮಾಡುವುದಕ್ಕೆ ವಿರಾಮವಾದರೂ ಮುಂದೆ ಬಂದಿದ್ದಕ್ಕೆ ಅವಕಾಶ ದೊರೆತಿದೆ. ಯಾವುದೂ ಶಾಶ್ವತ ಅಲ್ಲ. ಪರ ವಿರೋಧ ಗುಂಪುಗಾರಿಕೆ ಅವಕಾಶ ಇಲ್ಲ. ಅವಕಾಶ ಸಿಕ್ಕವರು ಗೌರವ ತರುವಂತೆ ಕೆಲಸ ಮಾಡಬೇಕು ಎಂದರು.
ಪೌರಕಾರ್ಮಿಕ ವೃತ್ತಿ ಪೂರ್ಣ ತ್ಯಜಿಸಿ:
ಪೌರಕಾರ್ಮಿಕರು ತಮ್ಮ ವೃತ್ತಿಯನ್ನು ಮಾಡುವುದಿಲ್ಲ ಎಂಬ ದೃಢ ನಿರ್ಧಾರ ಮಾಡಬೇಕು ಎಂದು ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಹೇಳಿದರು. ಇತರೆ ಸಮುದಾಯವರು ಯಾಕೆ ಪೌರಕಾರ್ಮಿಕ ವೃತ್ತಿ ಮಾಡುವುದಿಲ್ಲ? ಮುಸ್ಲಿಂ ಸಮುದಾಯದಲ್ಲಿ ಶೇ.೨೯ ಶಿಕ್ಷಿತರಿದ್ದಾರೆ. ಅವರು ಪೌರಕಾರ್ಮಿಕ ವೃತ್ತಿ ಬಿಟ್ಟು ಉಳಿದೆಲ್ಲ ಕೆಲಸ ಮಾಡುತ್ತಾರೆ. ಇನ್ನೆಷ್ಟು ವರ್ಷಗಳು ಪೌರಕಾರ್ಮಿಕರು ಕಸ ಗುಡಿಸಬೇಕು? ಪೌರಕಾರ್ಮಿಕರು ನಿವೃತ್ತರಾಗುತ್ತಿರುವವರು ಶೇ.೩ರಷ್ಟು. ಉಳಿದವರು ಕರ್ತವ್ಯದಲ್ಲಿದ್ದಾಗಲೇ ನಾನಾ ಕಾಯಿಲೆಗಳಿಗೆ ತುತ್ತಾಗಿ ಮೃತಪಡುತ್ತಿದ್ದಾರೆ. ಸಂಬಳ ನೀಡುವಂತೆ ಸರ್ಕಾರ ಒತ್ತಾಯಿಸುವುದು ಬೇಡ. ಪೌರಕಾರ್ಮಿಕ ವೃತ್ತಿಯನ್ನೂ ಮಾಡುವುದು ಬೇಡ ಎಂದು ಹೇಳಿದರು.
ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್.ಮಂಜುನಾಥ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ಭಾರತೀ ಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಅಹಿಂದ ಜವರಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಹೂಟಗಳ್ಳಿ ಮಹದೇವ್, ಮಾಜಿ ಸದಸ್ಯ ಅರುಣ್ ಕುಮಾರ್, ಮಾಜಿ ಮೇಯರ್ ಅನಂತು, ಕೆಪಿಸಿಸಿ ಸಂಯೋಜಕ ಮಂಜುನಾಥ್, ಕೆ.ರಮೇಶ್, ಸುನಿಲ್ ನಾರಾಯಣ, ಫ್ರಾನ್ಸಿಸ್, ಮಂಜುನಾಥ್, ಉಮಾಶಂಕರ್, ನಾಗರಾಜು, ಲಕ್ಷ್ಮಣ್, ಸತ್ಯ, ವಿನಯ್, ಕೃಷ್ಣ, ನಾಗರತ್ನಮ್ಮ ಮಂಜುನಾಥ್, ಕುಮಾರಿ ಇದ್ದರು.