ಕಳಪೆ ಕಾಮಗಾರಿ: ಹೇಮಾವತಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹದ ಎಚ್ಚರಿಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.೩೧: ತಾಲೂಕಿನ ಕಿಕ್ಕೇರಿ ಮತ್ತು ಕಸಬಾ ಹೋಬಳಿಯ ೫೩೭೧ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹೇಮಾವತಿ ನದಿ ನೀರು ಪೂರೈಕೆ ಮಾಡುವ ಹೇಮಾವತಿ ಎಡದಂಡೆ ನಾಲೆಯ ೫೪ ನೇ ವಿತರಣಾ ನಾಲೆಯ ಆಧುನೀಕರಣ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ಕಳೆಪೆ ಕಾಮಗಾರಿಯನ್ನು ಸರಿಪಡಿಸದಿದ್ದರೆ ಪಟ್ಟಣದ ಹೇಮಾವತಿ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ೫೪ನೇ ವಿತರಣಾ ನಾಲೆಯ ಕಳಪೆ ಕಾಮಗಾರಿಯ ವಿರುದ್ದ ಈಗಾಗಲೇ ಸ್ಥಳೀಯ ರೈತರು ಸಂಘಟನೆಗಳೊಂದಿಗೆ ಪ್ರತಿಭಟನೆ ಮಾಡಿ ನೀರಾವರಿ ಇಲಾಖೆಯ ಇಂಜಿನಿಯರುಗಳ ಗಮನ ಸೆಳೆದಿದ್ದಾರೆ. ಆದರೆ ರೈತರ ಪ್ರತಿಭಟನೆಗೆ ಇಲಾಖೆಯ ಇಂಜಿನಿಯರುಗಳು ಪೂರಕವಾಗಿ ಸ್ಪಂಧಿಸಿ ಗುಣಮಟ್ಟದ ಕಾಮಗಾರಿಗೆ ಕ್ರಮ ವಹಿಸಿಲ್ಲ. ನಾಲಾ ಆಧುನೀಕರಣದ ಕಳಪೆ ಕಾಮಗಾರಿಯ ಬಗ್ಗೆ ನಾನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಮ್ಮ ಮನವಿಗೆ ಸ್ಪಂಧಿಸಿರುವ ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆಯ ಆಡಳಿತ ವ್ಯವಸ್ಥಾಪಕರು ಮತ್ತು ಕಾರ್ಯದರ್ಶಿಗಳ ಮೂಲಕ ಸ್ಥಳ ಪರಿಶೀಲನೆ ಮಾಡಿಸುವ ಭರವಸೆ ನೀಡಿದ್ದಾರೆ. ತಕ್ಷಣವೇ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಕಾಮಗಾರಿ ಸ್ಥಳ ಪರಿಶೀಲನೆ ಮಾಡಬೇಕು. ಸ್ಥಳ ಪರಿಶೀಲನೆಯ ವೇಳೆ ಸ್ಥಳೀಯ ರೈತರಿಗೂ ಮಾಹಿತಿ ನೀಡಬೇಕು. ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ತಪ್ಪಿತಸ್ಥ ಇಂಜಿನಿಯರುಗಳ ವಿರುದ್ದವೂ ಕ್ರಮ ಜರುಗಿಸಬೇಕೆಂದು ರಾಜೇಗೌಡ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಕುಂದೂರು ಗ್ರಾಮದ ಎಲ್ಲೆಯಿಂದ ಹೇಮಾವತಿ ಎಡದಂಡಾ ನಾಲೆಯ ಸರಪಳಿ ೧೧೮.೫೦೦ ಕಿ.ಮೀ ನಲ್ಲಿ ಡಿ-೫೪ ವಿತರಣಾ ನಾಲೆಯು ಆರಂಭವಾಗುತ್ತದೆ. ಇತ್ತೀಚೆಗೆ ಸುಮಾರು ೫೫ ಕೋಟಿ ವೆಚ್ಚದಲ್ಲಿ ೫೪ ನೇ ವಿತರಣಾ ನಾಲೆಯ ನವೀಕರಣ ಕಾಮಗಾರಿ ಪ್ರಾಂರಭಗೊಂಡಿದ್ದು ಗುತ್ತಿಗೆದಾರ ಲೆಕ್ಕಶೀರ್ಷಿಕೆಯಂತೆ ಗುಣಮಟ್ಟ ಕಾಪಾಡದೆ ಕಳಪೆ ಕಾಮಗಾರಿ ನಡೆಸುತ್ತಿದ್ದಾನೆ. ೩೧.೨೫ ಕಿ.ಮೀ. ಉದ್ದ ಮಾಡಬೇಕಾಗಿದ್ದ ಕಾಮಗಾರಿಯನ್ನು ಗುತ್ತಿಗೆದಾರ ೨೬ ಕಿ.ಮೀ ಗೆ ಮಿತಿಗೊಳಿಸಿಕೊಂಡಿದ್ದು ಒಂದು ಕಿ.ಮೀ ಗೆ ಕನಿಷ್ಠ ೧.೫ ಕೋಟಿಯಂತೆ ಲೆಕ್ಕಹಾಕಿದರೂ ಗುತ್ತಿಗೆದಾರ ಕಾಮಗಾರಿ ಮಾಡದೆ ೭.೫ ಕೋಟಿ ಹಣ ಸರ್ಕಾರಕ್ಕೆ ನಷ್ಠವಾಗುತ್ತಿದೆ. ಮಳೆಯ ನಡುವೆ ನಾಲಾ ಲೈನಿಂಗ್ ಮಾಡುತ್ತಿದ್ದು ಎಲ್ಲಿಯೂ ಕಬ್ಬಿಣದ ಬಳಕೆ ಮಾಡುತ್ತಿಲ್ಲ. ಕೇವಲ ಮೂರು ಇಂಚಿನಷ್ಟು ಸಿಮೆಂಟ್ ಲೈನಿಂಗ್ ಮಾಡುತ್ತಿದ್ದು ಕಾಮಗಾರಿ ಹೀಗೆ ಸಾಗಿದರೆ ಒಂದು ವರ್ಷವೂ ಬಾಳಿಕೆ ಬರುವ ಲಕ್ಷಣ ಕಾಣುತ್ತಿಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಇಲಾಖೆಗೆ ಸಂಬಂಧಪಟ್ಟ ಇಂಜಿನಿಯರಾಗಲಿ ಅಥವಾ ಇತರೆ ಯಾವುದೇ ಅಧಿಕಾರಿಗಳಾಗಲಿ ಸ್ಥಳದಲ್ಲಿದ್ದು ಕಾಮಗಾರಿಯ ಗುಣಮಟ್ಟ ಪರೀಕ್ಷಿಸುತ್ತಿಲ್ಲ ಇದರಿಂದ ಗುತ್ತಿಗೆದಾರ ತನಗಿಷ್ಟಬಂದತೆ ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಮೌನ ವಹಿಸಿರುವುದು ನೋಡಿದರೆ ಗುತ್ತಿಗೆದಾರನ ಜೊತೆ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ವ್ಯಕ್ತಪಡಿಸಿರುವ ರೈತ ಮುಖಂಡ ಎಂ.ವಿ.ರಾಜೇಗೌಡ ಹಣದ ಲೂಟಿಗಾಗಿ ಗುತ್ತಿಗೆದಾರ ಮತ್ತು ಎಂಜಿನಿಯರುಗಳು ಪರಸ್ಪರ ಶಾಮೀಲಾಗಿದ್ದಾರೆಂದು ದೂರಿದರು.
ಈ ನಾಲೆ ಆಧುನೀಕರಣಗೊಂಡರೆ ಕಸಬಾ ಹೋಬಳಿಯ ಮಾಕವಳ್ಳಿ, ಲಿಂಗಾಪುರ, ಕುಂದನಹಳ್ಳಿ, ಮಲ್ಲೇನಹಳ್ಳಿ, ಗಾಂಧಿನಗರ ಹಿರೀಕಳಲೆ, ವ್ಯಾಪ್ತಿಯ ೫೩೭೧ ಎಕರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಈ ನಾಲಾ ಮೂಲಕ ೧೫ ಕೆರೆಗಳ ೧೧೭೫ ಎಕರೆ ಪ್ರದೇಶ ನೀರು ಕಾಣಲಿದೆ. ಕೆರೆಗಳು ಭರ್ತಿಯಾಗುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಿ ಸಾವಿರಾರು ಎಕರೆ ಪ್ರದೇಶದ ಕೊಳವೆ ಬಾವಿಗಳು ಸಜೀವಗೊಳ್ಳಲಿವೆ. ರೈತರು ನೀರಾವರಿ ಇಲಾಖೆಯ ಇಂಜಿನಿಯರುಗಳ ಮೇಲೆ ನಂಬಿಕೆ ಕಳೆದು ಕೊಂಡಿದ್ದಾರೆ. ಇಂತಹ ಮಹತ್ವದ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ವಹಿಸಿ ರೈತರಿಗೆ ಶಾಶ್ವತ ಅನುಕೂಲ ಕಲ್ಪಿಸುವತ್ತ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ ರೈತ ಸಮುದಾಯದ ಸಾಶ್ವತ ಬದುಕಿಗಾಗಿ ರಾಜ್ಯ ರೈತಸಂಘ ದೊಡ್ಡಮಟ್ಟದ ಹೋರಾಟಕ್ಕೆ ಇಳಿಯುವುದಾಗಿ ಎಂ.ವಿ.ರಾಜೇಗೌಡ ಎಚ್ಚರಿಸಿದರು