ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಸ್ಥಾನಮಾನ ನೀಡಿಕೆ : ಸೂರ್ಯಬಾಲರಾಜ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೩೧- ಮಾಜಿ ಸಂಸದರು, ಬಿಜೆಪಿ ಹಿರಿಯ ಮುಖಂಡರು ಹಾಗೂ ಕುರುಬ ಸಮಾಜ ಹಿರಿಯರಾದ ಎಚ್.ಸಿ. ವಿಜಯಶಂಕರ್ ಅವರನ್ನು ಕೇಂದ್ರ ಸರ್ಕಾರ ಮೇಘಾಲಯ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದನ್ನು ತಾಲೂಕು ಕುರುಬರ ಸಂಘ ಸ್ವಾಗತಿಸುತ್ತದೆ ಎಂದು ಸಂಘದ ನಿರ್ದೇಶಕ ಸೂರ್ಯ ಬಾಲರಾಜ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾಜೀ, ರಾಜ್ಯ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ವರಿಷ್ಟರು ಹಿರಿಯ ಹಾಗು ನಿಷ್ಠಾವಂತ ಬಿಜೆಪಿ ಮುಖಂಡರಾದ ವಿಜಯ ಶಂಕರ್ ಅವರನ್ನು ಅತ್ಯುನ್ನತ ಸ್ಥಾನವಾಗಿರುವ ರಾಜ್ಯಪಾಲರ ಹುದ್ದೆಗೆ ಆಯ್ಕೆ ಮಾಡುವ ಮೂಲಕ ರಾಜ್ಯಕ್ಕೆ ಹಾಗೂ ಕುರುಬರ ಸಮಾಜಕ್ಕೆ ಪ್ರಾತಿನಿಧ್ಯ ಕಲ್ಪಿಸಿದ್ದಾರೆ ಎಂದು ಅಭಿನಂದಿದರು.
ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ಸ್ಥಾನಮಾನಗಳು ದೊರೆಯುತ್ತಿವೆ. ಪಕ್ಷಕ್ಕೆ ನಿಷ್ಠೆಯಿಂದ ದುಡಿದವರಿಗೆ ಸ್ಥಾನಮಾನಗಳು ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ವಿಜಯಶಂಕರ್ ಅವರು ಸಾಕ್ಷಿಯಾಗಿದ್ದಾರೆ. ಸಂಸದರಾಗಿ, ವಿಧಾನಪರಿಷತ್ ಸದಸ್ಯರಾಗಿ, ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದ ಅವರನ್ನು ಪಕ್ಷ ಈಗ ರಾಜ್ಯಪಾಲರ ಹುದ್ದೆಯನ್ನು ನೀಡಲಾಗಿದೆ. ರಾಜ್ಯದಿಂದ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್, ದಿ. ಬಿ. ರಾಚಯ್ಯ, ಎಸ್.ಎಂ. ಕೃಷ್ಣ, ಸೇರಿದಂತೆ ಅನೇಕರು ರಾಜ್ಯಪಾಲರಾಗಿದ್ದಾರೆ. ಈಗ ಮತ್ತೊಂದು ಗರಿ ವಿಜಯಶಂಕರ್ ಅವರಾಗಿದ್ದಾರೆ ಎಂದರು.
ಕುರುಬರ ಸಮಾಜಕ್ಕೆ ದೊರೆತಿರುವ ರಾಜ್ಯಪಾಲರ ಹುದ್ದೆಯನ್ನು ವಿಜಯಶಂಕರ್ ಅವರು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತಾ ಬಂದಿದೆ. ಪ್ರಧಾನಿಗಳಾಗಿರುವ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗದವರು, ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ಅದಿವಾಸಿ ಸಮಾಜದವರು, ಅದೇ ರೀತಿ ಬಹಳಷ್ಟು ಹಿಂದುಳಿದ ವರ್ಗಗಳ ನಾಯಕರನ್ನು ಬಿಜೆಪಿ ಗುರುತಿಸಿ ಸೂಕ್ತಸ್ಥಾನಮಾನ ನೀಡುತ್ತಿದೆ ಎಂದು ಸೂರ್ಯಬಾಲರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ತಾಲೂಕು ಕುರುಬರ ಸಂಘದ ನಿರ್ದೇಶಕ ಹಳೇಪುರ ಮಹೇಶ್, ಚುಂಗಡಿಪುರ ಮಹೇಶ್, ಶಿವಪುರ ನಂಜುಂಡಸ್ವಾಮಿ, ಮಹೇಶ್ ಪ್ರಸಾದ್, ಹೊನ್ನಹಳ್ಳಿ ಮಲ್ಲೇಶ್, ಪ್ರಕಾಶ್ ಇದ್ದರು.