ಯುವ ಕಾಂಗ್ರೆಸ್ ಚುನಾವಣೆ : ಸಕ್ರಿಯವಾಗಿ ಯುವಕರು ಭಾಗವಹಿಸಲು ಮರಿಸ್ವಾಮಿ ಕರೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.೩೧- ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಚುನಾವಣೆ ಘೋಷಣೆಯಾಗಿದ್ದು, ಒಂದು ತಿಂಗಳ ಕಾಲ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಮತ್ತು ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸಿ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಯುವ ನೇತಾರರಾದ ರಾಹುಲ್ ಗಾಂಧಿ ಅವರು ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಯುವ ಮತದಾರರೇ ಆಯ್ಕೆ ಮಾಡುವ ವ್ಯವಸ್ಥೆಯನ್ನು ಚಾಲ್ತಿಗೆ ತಂದರು. ಇದರಿಂದ ಯುವ ಶಕ್ತಿ ಹೆಚ್ಚಾಗಿ ರಾಜಕೀಯಕ್ಕೆ ಬರಲು ಸಾಧ್ಯವಾಗಿದೆ. ಮತ್ತು ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್‌ನಿಂದಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡು ದೊಡ್ಡ ನಾಯಕರಾಗಲು ಸಹಕಾರಿಯಾಗುತ್ತದೆ ಎಂದರು.
ನಮ್ಮ ಹೆಮ್ಮೆಯ ಸಂಸದರಾಗಿದ್ದ ದಿ. ಆರ್.ಧ್ರುವನಾರಾಯಣ್, ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಯುವ ಕಾಂಗ್ರೆಸ್‌ನಿಂದ ಬೆಳೆದು ಬಂದವರು. ಹೀಗಾಗಿ ಇವರಿಗೆ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರ ಸಂಕಷ್ಟಗಳು ಬಹುಬೇಗ ಅರ್ಥವಾಗುತ್ತದೆ. ತಕ್ಷಣ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆ. ತಾವೆಲ್ಲರು ಸಹ ಯುವ ಕಾಂಗ್ರೆಸ್ ಸದಸ್ಯತ್ವವನ್ನು ಹೊಂದಿ ಈ ಒಂದು ತಿಂಗಳಲ್ಲಿ ಜಿಲ್ಲೆಯಾದ್ಯಂತ ಹೆಚ್ಚು ಯುವಕ, ಯುವತಿಯರನ್ನು ಯುವ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿ, ಮತ ಹಾಕಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟಗೊಳಿಸಬೇಕು. ಪಕ್ಷ ಸಧೃಡಗೊಂಡರೆ, ತಾವು ಸಹ ಪ್ರಬಲ ನಾಯಕರಾಗಿ ಹೊರಹೊಮ್ಮಲು ಸಾಧ್ಯ ಎಂದು ಮರಿಸ್ವಾಮಿ ಕಿವಿಮಾತು ಹೇಳಿದರು.
ಯುವ ಕಾಂಗ್ರೆಸ್‌ನ ವಲಯ ಕಾಂಗ್ರೆಸ್ ಪ್ರತಿನಿಧಿ ಕಾಳಿಮತ್ತು ಮಾತನಾಡಿ, ಜು.೨೬ ರಿಂದ ಆ. ೨೬ ರ ವರೆಗೆ ಸತತ ಒಂದು ತಿಂಗಳು ಕಾಲ ಯುವ ಕಾಂಗ್ರೆಸ್ ಘಟಕಕ್ಕೆ ಚುನಾವಣೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸದಸ್ಯತ್ವ ಅಭಿಯಾನವು ಸಹ ನಡೆಯುತ್ತಿದೆ. ಅಧ್ಯಕ್ಷ ಆಕಾಂಕ್ಷಿಗಳು ಯುವಕರನ್ನು ಕಾಂಗ್ರೆಸ್ ಸದಸ್ಯರನ್ನಾಗಿ ಮಾಡುವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಮತವನ್ನು ಹಾಕಿಸಿಕೊಳ್ಳುವ ವ್ಯವಸ್ಥೆ ಇದಾಗಿದೆ. ಯುವ ಕಾಂಗ್ರೆಸ್ ಸದಸ್ಯರಾದವರು ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಹಾಗೂ ಪ್ರಧಾನ ಕಾರ್ಯಧರ್ಶಿ ಹಾಗೂ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ಬ್ಲಾಕ್ ಅಧ್ಯಕ್ಷ ಸ್ಥಾನಗಳಿಗೆ ಒಟ್ಟು ಆರು ಮತವನ್ನು ಚಲಾಯಿಸುವ ಹಕ್ಕು ಪಡೆದುಕೊಳ್ಳುತ್ತಾರೆ. ಹೆಚ್ಚು ಮತ ಪಡೆದವರು ಅಧ್ಯಕ್ಷರಾದರೆ, ಇನ್ನುಳಿದವರು ಯುವ ಕಾಂಗ್ರೆಸ್‌ನ ಪದಾಧಿಕಾರಿಗಳಾಗಿ ನೇಮಕವಾಗಲಿದ್ದಾರೆ. ಇದೊಂದು ಸೌಹಾರ್ದಯುತ, ಸ್ನೇಹಮಯವಾದ ಚುನಾವಣೆಯಾಗಿದ್ದು, ನಮ್ಮ ಪಕ್ಷದೊಳಗೆ ನಡೆಯುವ ಅಂತರಿಕ ಚುನಾವಣೆಯಲ್ಲಿ ಎಲ್ಲರು ಸಕ್ರಿಯವಾಗಿ ಭಾಗವಹಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಕಚೇರಿ ಕಾರ್ಯದರ್ಶಿ ಎಎಚ್‌ಎನ್ ಖಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಪದಾಧಿಕಾರಿಗಳಾದ ಕೆಲ್ಲಂಬಳ್ಳಿ ನಾಗೇಂದ್ರ, ಕಿರಗಸೂರು ಸೈಯದ್ ತೌಸಿಫ್, ಸೈಯದ್ ಇಸ್ಮಾಯಿಲ್, ಸೈಯದ್ ಮುಜಾಹಿಬ್, ಯೋಗೇಂದ್ರ, ಸುರೇಶ್, ಚಂದನ್, ಸಚಿನ್, ಸಾದಿಕ್ ಮೊದಲಾದವರು ಇದ್ದರು.