ಕ್ಷೇತ್ರದ ಅಭಿವೃದ್ಧಿಗೆ ಪ್ರಥಮ ಆದ್ಯತೆ: ಶಾಸಕ ಎಂ.ವೈ ಪಾಟೀಲ್
ಅಫಜಲಪುರ : ಸೆ.29:ತಾಲೂಕಿನ ಸಮಗ್ರ ನೀರಾವರಿಯನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಜೊತೆಗೆ ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಿಸಲು ಭೀಮಾ ನದಿಯಿಂದ ಕಾಲುವೆ ಮೂಲಕ ನೀರು ಹರಿಸಿ ಮಳೆ ನೀರು ಸಂಗ್ರಹಿಸಲು ಚೆಕ್ ಡ್ಯಾಮ್ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಲಾಗುವುದು.
ತಾಲೂಕಿನ ಕರಜಗಿ ಗ್ರಾಮದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 5 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು ಕರಜಗಿ ಹೋಬಳಿ ಕೇಂದ್ರದಲ್ಲಿ ಮಾಶಾಳ, ಮಣ್ಣೂರ, ಉಡಚಾಣ ದೊಡ್ಡ ಗ್ರಾಮಗಳಾಗಿದ್ದು ಈ ಭಾಗದ ಯುವ ಪ್ರತಿಭೆಗಳಿಗೆ ಅನುಕೂಲವಾಗಲು ಗ್ರಾಮಸ್ಥರು ಉಚಿತವಾಗಿ ಜಮೀನು ನೀಡಿದರೆ ಶೀಘ್ರದಲ್ಲೇ ಸುಸಜ್ಜಿತವಾದ ಗ್ರಾಮೀಣ ಕ್ರೀಡಾಂಗಣ ನಿರ್ಮಿಸಲಾಗುವುದು. ತಾಲೂಕಿನ ಬಂದರವಾಡ ಗ್ರಾಮದ ಭೀಮಾ ನದಿಯ ಹತ್ತಿರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ತುಂಬುವ ಯೋಜನೆ ಸರಕಾರದ ಮುಂದಿದ್ದು ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನಸಂಖ್ಯೆ ಆಧರಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ತಾಲೂಕಿನ ಸಮಗ್ರ ಅಭಿವೃದ್ಧಿಗೆಯನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನದೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವುದಾಗಿ ತಿಳಿಸಿದರು.
ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಮಾತನಾಡಿ, ಶಾಸಕ ಎಂ.ವೈ ಪಾಟೀಲ್ ಅವರು ಅಧಿಕಾರದಲ್ಲಿದ್ದಾಗ ಅಭಿವೃದ್ದಿಗೆ ಒತ್ತು ನೀಡುವ ಕೆಲಸ ಮಾಡಿದ್ದಾರೆ. ಅನೇಕ ಬಾರಿ ಚುನಾವಣೆಗಳು ಸೋತಾಗಲು ಕೂಡ ಜನರ ಕೆಲಸ ಮಾಡಿದ್ದಾರೆ. ಇಂತಹ ಜನಪರ ಕಾಳಜಿಯ ನಾಯಕರು ಶಾಸಕರಾಗಿದ್ದು ನಮ್ಮ ಪುಣ್ಯ ಎಂದ ಅವರು ಕರ್ಜಗಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟಿತ್ತು, ಅದನ್ನು ಭೀಮಾ ನದಿಗೆ ಪೈಪ್ ಲೈನ್ ಮಾಡಿಸುವ ಮೂಲಕ ನೀಗಿಸಿದ್ದಾರೆ. ಈಗ ಗ್ರಾಮದ ರೈತರು ಬಹುತೇಕ ಒಣ ಬೇಸಾಯವನ್ನೇ ಅವಲಂಬಿಸಿದ್ದು ತಾವು ಮುತುವರ್ಜಿ ವಹಿಸಿ ಮತ್ತಷ್ಟು ನೀರಾವರಿ ಯೋಜನೆ ರೂಪಿಸಿದರೆ ಈ ಭಾಗದ ರೈತರ ಬದುಕು ಬಂಗಾರವಾಗಲಿದೆ ಎಂದರು.
ತಹಸೀಲ್ದಾರ ಸಂಜೀವಕುಮಾರ ದಾಸರ್, ಜಿಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಪಾಟೋಳಿ, ಮುಖಂಡರಾದ ಮಹಾದೇವಪ್ಪ ಕರೂಟಿ, ಶಿವಾನಂದ ಗಾಡಿ ಸಾಹುಕಾರ, ಪ್ರಕಾಶ ಜಮಾದಾರ, ರಾಮಣ್ಣ ನಾಯ್ಕೋಡಿ, ಜ್ಞಾನೇಶ್ವರಿ ಪಾಟೀಲ್, ಅನಸೂಯ ಸೂಲೆಕರ, ಇರ್ಫಾನ್ ಜಮಾದಾರ, ಬಿಸ್ಮೀಲ್ಲಾ ಶೇಕ್, ಚಿದಾನಂದ ತಳವಾರ, ಭೀಮಾಶಂಕರ ಭೂಂಯಾರ, ಲೋಕೋಪಯೋಗಿ ಅಧಿಕಾರಿ ಲಕ್ಷ್ಮೀಕಾಂತ ಬಿರಾದಾರ ಸೇರಿದಂತೆ ಗ್ರಾಮಸ್ಥರು ಇದ್ದರು. ಅಂಬಣ್ಣ ನರಗೋಧಿ ನಿರೂಪಿಸಿ ವಂದಿಸಿದರು.