ವಿಜಯನಗರ ಜಿಲ್ಲೆ : 50 ಹಾಸಿಗೆಗಳ ಕ್ರಿಟಿಕಲ್ಕೇರ್ ಯೂನಿಟ್ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ ಜಿಲ್ಲೆ) ಸೆ.29: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ ನಿರ್ಮಾಣದ ಕಾಮಗಾರಿಗೆ ಸಂಸದರಾದ ಈ. ತುಕಾರಾಮ ಮತ್ತು ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಸೆ.28ರಂದು ಭೂಮಿ ಪೂಜೆ ನೆರವೇರಿಸಿದರು.
ಹೊಸಪೇಟೆಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಸಂಸದರಾದ ಈ ತುಕಾರಾಮ ಅವರು ಮಾತನಾಡಿ, ಅಂದಾಜು 28.52 ಕೋಟಿ ರೂ.ವೆಚ್ಚದಲ್ಲಿ ಸೆ.28ರಂದು ಭೂಮಿ ಪೂಜೆಯನ್ನು ನೆರವೇರಿಸಿರುವುದು ವಿಜಯನಗರ ಜಿಲ್ಲೆಯಲ್ಲಿ ಇತಿಹಾಸವಾಗಿ ಉಳಿಯಲಿದೆ. ಇದಕ್ಕೆ ಅವಕಾಶ ಕಲ್ಪಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಾವು ಅಭಿನಂದನೆ ತಿಳಿಸುವುದಾಗಿ ಹೇಳಿದರು.
ವಿಜಯನಗರ ಜಿಲ್ಲೆ ಜೊತೆಗೆ ಅಖಂಡ ಬಳ್ಳಾರಿ ಜನರ ಆಶಯಗಳಿಗೆ ನಾವು ಸದಾಕಾಲ ಸ್ಪಂದನೆ ನೀಡುತ್ತಿದ್ದೇವೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇನ್ನು ಸಹ ಸಾಕಷ್ಟು ಸುಧಾರಣೆ ತರುವ ಸಂಕಲ್ಪ ಮಾಡುತ್ತಿದ್ದು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಮನುಷ್ಯನಿಗೆ ಆರೋಗ್ಯ ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ವಿಜಯನಗರ ಮತ್ತು ಬಳ್ಳಾರಿಯ ಲಕ್ಷಾಂತರ ಜನರ ಆರೋಗ್ಯ ಸುಧಾರಣೆ, ರಕ್ಷಣೆಯ ಸುದ್ದೇಶ ಹೊಂದಿ ವಿವಿಧೆಡೆ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ತುಂಗಭದ್ರಾ ಡ್ಯಾಮಿದೆ. ಪ್ರಖ್ಯಾತ ಕಾರ್ಖಾನೆಗಳಿವೆ. ಹೇರಳವಾದ ಪ್ರಾಕೃತಿಕ ಸಂಪತ್ತಿದೆ. ಇಲ್ಲಿನ ಪ್ರಾಕೃತಿಕ ಸಂಪತ್ತು ಮತ್ತು ನೀರಿನ ಸಂಪನ್ಮೂಲ ಬಳಸಿಕೊಂಡು ಮುಂದಿನ ಪೀಳಿಗೆಯು ನೆನಪಿಸುವ ಹಾಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಲು ಸಂಕಲ್ಪ ಮಾಡಿದ್ದಾಗಿ ಸಂಸದರು ತಿಳಿಸಿದರು.
ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಮಾತನಾಡಿ, ಸಂಪತ್ತಿಗಿಂತ ಆರೋಗ್ಯ ಹೆಚ್ಚು ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೊಸಪೇಟೆ ಅಷ್ಟೇ ಅಲ್ಲ ಇಡೀ ಜಿಲ್ಲೆಯ ಜನರ ಅನುಕೂಲಕ್ಕಾಗಿ ಆಸ್ಪತ್ರೆಗಳನ್ನು ಕಟ್ಟುವ ಕಾರ್ಯ ಮಾಡುತ್ತಿದ್ದೇವೆ. 28.52 ಕೋಟಿ ರೂ.ವೆಚ್ಚದಲ್ಲಿ ಈಗ ನಿರ್ಮಾಣವಾಗಲಿರುವ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಹೊಸಪೇಟೆ ನಗರದಲ್ಲಿ ಈಗಿರುವ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ಕೆಲವು ಆಸ್ಪತ್ರೆಗಳನ್ನು ಮೇಲ್ದರ್ಜೇರಿಸಬೇಕು ಎಂಬುದಾಗಿ ಕೇಳಿದ್ದೇವೆ. ಸಮಾಜದ ಬೆಳೆವಣಿಗೆಯಲ್ಲಿ ಜನರ ಆರೋಗ್ಯದ ಸ್ಥಿತಿಗತಿಯು ಸಹ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ನಾವು ಯೋಚಿಸಿ ಯೋಜಿಸಿ ಬೇರೆ ಬೇರೆ ಕೆಲಸ ಕಾರ್ಯಗಳ ಜೊತೆಗೆ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದ ಬೆಳವಣಿಗೆಯ ಕಾರ್ಯಕ್ಕು ಸಹ ಅಷ್ಟೇ ಆದ್ಯತೆ ನೀಡಿರುವುದಾಗಿ ಶಾಸಕರು ತಿಳಿಸಿದರು.
ಸಮಾರಂಭದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೇಮಿರಾಜ ನಾಯ್ಕ್, ಹೊಸಪೇಟೆಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಎಲ್.ಆರ್.ಶಂಕರ್ ನಾಯ್ಕ್, ನಗರಸಭೆ ಉಪಾಧ್ಯಕ್ಷರಾದ ರಮೇಶ್ ಗುಪ್ತ, ಆರ್‌ಸಿಎಚ್ ಅಧಿಕಾರಿಗಳಾದ ಡಾ.ಜಂಬಯ್ಯ, ಆರೋಗ್ಯ ಶಿಕ್ಷಣಾಧಿಕಾರಿ ಡಾ.ದೊಡ್ಡಮನಿ ಎಂ.ಪಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್ ಹಾಗೂ ಆರೋಗ್ಯ ಇಲಾಖೆಯ ಇನ್ನೀತರ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.