‘ಪ್ರಾತಃ ಸ್ಮರಣೀಯರು’ ಅಪರೂಪದ ಕೃತಿ:ತೋಂಟದ ಸಿದ್ಧರಾಮ ಶ್ರೀಗಳು
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೩೧:ಡಾ. ಫ.ಗು.ಹಳಕಟ್ಟಿ, ಬಂಥನಾಳ ಶ್ರೀಗಳು, ಬಿ.ಎಂ.ಪಾಟೀಲ ಮತ್ತು ಬಂಗಾರಮ್ಮ ಸಜ್ಜನರು ಶಿಕ್ಷಣ, ಸಾಹಿತ್ಯ, ಸಾಮಾಜಿಕ ಕ್ಷೇತ್ರದ ರೂವಾರಿಗಳು. ಈ ಮಹನೀಯರು ಉತ್ತರ ಕರ್ನಾಟಕದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಆಧಾರ ಸ್ತಂಭಗಳು ಎಂದು ಪ.ಪೂ. ತೋಂಟದ ಸಿದ್ಧರಾಮ ಶಿವಯೋಗಿಗಳು ಹೇಳಿದರು.
ವಿಶ್ರಾಂತ ಪ್ರಾಚಾರ್ಯ ಡಾ. ವಿ.ಡಿ. ಐಹೊಳ್ಳಿ ಅವರು ಬರೆದ ಬಿ.ಎಲ್.ಡಿ.ಇ. ಸಂಸ್ಥೆಯ ಪ್ರಾತಃಸ್ಮರಣೀಯರು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ನೋವನ್ನುಂಡು ಶಿಕ್ಷಣದ ಜ್ಯೋತಿ ಬೆಳಗಿಸಿದವರು ಹಳಕಟ್ಟಿಯವರು. ಶೈಕ್ಷಣಿಕ ಕ್ರಾಂತಿಯ ಮೂಲಕ ಸಂಸ್ಥೆಯನ್ನು ಮುನ್ನಡೆಸಿದರು ಬಂಥನಾಳ ಶ್ರೀಗಳು. ಶಿಕ್ಷಣದ ಜೊತೆ ಸಾಹಿತ್ಯ, ಸಾಂಸ್ಕೃತಿಕವಾಗಿ ಸಂಸ್ಥೆಯನ್ನು ಬೆಳೆಸಿದವರು ಬಿ.ಎಂ.ಪಾಟೀಲರು. ಸ್ವಂತ ಜಮೀನನ್ನೇ ದಾನ ಮಾಡಿ ಸಾವಿರಾರು ವಿದ್ಯಾರ್ಥಿಗಳು ವಿದ್ಯೆ ಸಿಗುವಂತೆ ಮಾಡಿದ ಮಹಾದಾನಿ ಬಂಗಾರಮ್ಮ ಸಜ್ಜನ. ಇಂಥವರ ಕುರಿತು ಕೃತಿಯೊಂದು ಹೊರಬಂದಿರುವುದು ಸಂತಸದ ಸಂಗತಿ. ಇದೊಂದು ಅಪರೂಪದ ಕೃತಿ ಎಂದು ಪ.ಪೂ. ತೋಂಟದ ಸಿದ್ಧರಾಮ ಶಿವಯೋಗಿಗಳು ಅಭಿಪ್ರಾಯ ಪಟ್ಟರು.
ಬೆಳಗಾವಿ ಕೆ.ಎಲ್.ಇ. ಸಂಸ್ಥೆಯ ಚೇರಮನ್ ಡಾ. ಪ್ರಭಾಕರ ಕೋರೆ ಅವರು ಕೃತಿಯನ್ನು ಅವಲೋಕಿಸಿ “ಸಮಾಜಕ್ಕಾಗಿ, ಜನರಿಗಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇಂಥ ಕೃತಿಗಳು ಪ್ರಕಟವಾಗಬೇಕು ಎಂದರು.
ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರವನ್ನು ವಿಕ್ಷೀಸಿದ ಪ.ಪೂ. ಸಿದ್ಧರಾಮ ಶ್ರೀಗಳು, ಪ್ರಭಾಕರಕೋರೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವÀ ಡಾ. ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸುನೀಲಗೌಡ ಪಾಟೀಲ, ಸೋಮನಗೌಡ ಪಾಟೀಲ, ಡಾ. ಮಹಾಂತೇಶ ಬಿರಾದಾರ, ಡಾ. ಆರ್.ಎಸ್. ಮುಧೋಳ, ಡಾ. ಶಂಭು ಮೆಹರವಾಡೆ, ಡಾ. ರಾಘವೇಂದ್ರ ಕುಲಕರ್ಣಿ, ಡಾ. ಆರ್.ಬಿ. ಕೊಟ್ನಾಳ, ಪ್ರೊ. ಎಸ್.ಎಚ್. ಲಗಳಿ, ಪ್ರೊ. ಎನ್.ಜಿ. ಕರೂರ, ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಡಾ. ಎಂ.ಎಸ್. ಮದಭಾವಿ ಮುಂತಾದವರು ಉಪಸ್ಥಿತರಿದ್ದರು.