ಸಾಮಾಜಿಕ ಅಸಮಾನತೆಯನ್ನು ತೊಲಗಿಸುವ ಸಂಸ್ಕಾರವೇ ದೀಕ್ಷೆ: ಕಾಶಿ ಜಗದ್ಗುರುಗಳು
ಕಲಬುರಗಿ ಜು.30: ಮನುಷ್ಯ ಮನುಷ್ಯರಲ್ಲಿ ಬೆಳೆದು ಬಂದಿರುವ ಅಸಮಾನತೆಯನ್ನು ತೊಡೆದು ಹಾಕಿ ಸಾಮಾಜಿಕ ಸಮಾನತೆಯನ್ನು ಕೊಡುವ ದಿವ್ಯ ಸಂಸ್ಕಾರವೇ ದೀಕ್ಷೆ ಎಂಬುದಾಗಿ ಶ್ರೀ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಅವರು ಕಲಬುರಗಿ ನಗರದ ಸೊಗಸನಗೇರಿಯ ಶ್ರೀ ಗುರುಶಾಂತಲಿAಗೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯ ಪ್ರವಚನ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಆರ್ಶೀವಚನ ನೀಡುತ್ತಿದ್ದರು.
ಸನಾತನ ವೀರಶೈವ ಧರ್ಮ ಸಂಸ್ಥಾಪಕರಾದ ಶ್ರೀ ಜಗದ್ಗುರು ಪಂಚಾಚಾರ್ಯರು ಮನುಷ್ಯ ಮನುಷ್ಯರಲ್ಲಿಯ ಅಸಮಾನತೆಯನ್ನು ತೊಡೆದು ಹಾಕಿ ಸಾಮಾಜಿಕ ಸಮಾನತೆಯನ್ನು ಉಂಟು ಮಾಡುವುದಕ್ಕಾಗಿಯೇ ದೀಕ್ಷೆ ಎಂಬ ಸಂಸ್ಕಾರವನ್ನು ವಿಧಿಸಿದಾರೆ. ಗುರುವಿನಿಂದ ದೀಕ್ಷೆಯನ್ನು ಪಡೆದುಕೊಂಡ ಬಳಿಕ ಜಾತಿಗತವಾದ ಭೇದ ಭಾವಗಳು ಅಳಿದು ಹೋಗುತ್ತವೆ. “ಇಂಧನೇಷ್ಟಗ್ನಿದಗ್ಧೇಷು ಜಾತಿಭೇದೋ ನ ವಿದ್ಯತೇ” ಎಂಬ ಶ್ರೀ ಸಿದ್ಧಾಂತ ಶಿಖಾಮಣಿ ಉಕ್ತಿಯಂತೆ ಮಾವು, ಬೇವು, ಆಲ, ಅರಳಿ, ಬನ್ನಿ ಜಾತಿಯ ಗಿಡದ ಕಟ್ಟಿಗೆಗಳು ಅಗ್ನಿಯಲ್ಲಿ ಸುಡುವುದಕ್ಕಿಂತಲೂ ಮೊದಲು ಅವುಗಳ ಜಾತಿಯನ್ನು ಗುರುತಿಸಬಹುದು ಆದರೆ ಅಗ್ನಿಕುಂಡದಲ್ಲಿ ಸುಟ್ಟು ಬೆಂಕಿಯಾದ ಮೇಲೆ ಕಟ್ಟಿಗೆಯ ಜಾತಿಯನ್ನು ಹೇಗೆ ಅರಿಸಲಾಗುವುದಿಲ್ಲವೋ ಅದರಂತೆ ದೀಕ್ಷೆಯನ್ನು ತೆಗೆದುಕೊಳ್ಳುವುಕ್ಕಿಂತಲೂ ಮೊದಲು ಸಮಾಜದಲ್ಲಿ ರೂಢಿಗತವಾದ ಜಾತಿಗಳನ್ನು ಹೇಳಬಹುದು ದೀಕ್ಷೆ ಎಂಬ ಅಗ್ನಿಯಲ್ಲಿ ಸುಟ್ಟುಕೊಂಡು ಸಂಸ್ಕಾರವನ್ನು ಪಡೆದ ಮೇಲೆ ಮೊದಲನೆ ಜಾತಿಗಳು ಅಳಿದು ಹೋಗುತ್ತವೆ. ದೀಕ್ಷೆಯನ್ನು ಪಡೆದ ಯಾರೇ ಇದ್ದರೂ ಅವರೆಲ್ಲರೂ ಶಿವ ಸ್ವರೂಪವೇ ಆಗುತ್ತಾರೆ. ಆದ್ದರಿಂದ ದೀಕ್ಷೆ ಪಡೆದುಕೊಂಡವರಲ್ಲಿ ಜಾತಿ ಭೇದವನ್ನು ಮಾಡಕೂಡದು ಎಂಬುದಾಗಿ ವೀರಶೈವ ಆಚಾರ್ಯರು ಹೇಳಿದ್ದಾರೆ. ಅದನ್ನೇ ಬಸವಣ್ಣನವರು “ಡೋಹರ ನೆಂಬೆನೆ ಕಕ್ಕಯ್ಯನ ಮಾದಾರ ನೆಂಬೆನೆ ಚೆನ್ನಯ್ಯನ” ಎಂಬ ವಚನದಲ್ಲಿ ದೀಕ್ಷಾ ಸಂಸ್ಕಾರವನ್ನು ಹೊಂದಿದ ಕಕ್ಕಯ್ಯ ಹಾಗೂ ಚೆನ್ನಯರ ಜಾತಿಯನ್ನು ಉಲ್ಲೇಖಿಸಬಾರದು ಎಂಬುದಾಗಿ ಹೇಳಿದ್ದನ್ನು ಕಾಣಬಹುದು ಹೀಗೆ ಜಾತಿ ಭೇದವನ್ನು ಅಳಿಸಿ ಸಾಮಾಜಿಕ ಸಮಾನತೆಯನ್ನು ಒದಗಿಸಿಕೊಂಡುವ ವೀರಶೈವ ದೀಕ್ಷಾ ಸಂಸ್ಕಾರದಲ್ಲಿ ಸರ್ವರಿಗೂ ಮುಕ್ತವಾದ ಅವಕಾಶವಿರುವುದರಿಂದ ಪ್ರತಿಯೊಬ್ಬರು ಇಷ್ಟಲಿಂಗ ದೀಕ್ಷೆಯನ್ನು ಹೊಂದಿ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ನುಡಿದರು.