ಇನ್ಮುಂದೆ ಹೊಸ ಸಂಕಲ್ಪದೊಂದಿಗೆ ಕಲಬುರಗಿ ನಗರಾಭಿವೃದ್ಧಿ: ಡಾ. ಅಜಯ್‌ ಸಿಂಗ್‌ ವಿಶ್ವಾಸ
ಕಲಬುರಗಿ ಜು.30: ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ 22ನೇ ಮೇಯರ್ ಆಗಿ ಯಲ್ಲಪ್ಪ ನಾಯ್ಕೋಡಿ, ಉಪ ಮೇಯರ್‌ ಹೀನಾಬೇಗಂ ಅಬ್ದುಲ್ ರಹೀಂ ಅವಿರೋಧ ಆಯ್ಕೆಯಾಗಿರೋದಕ್ಕೆ ಕೆಕೆಆರ್‌ಡಿಬಿ ಅದ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಧರ್ಮಸಿಂಗ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾಂಗ್ರೆಸ್‌ ಪಕ್ಷದ ಅಧಿಕಾರ ಪಾಲಿಕೆಯಲ್ಲಿ ಬರುವುದರ ಜೊತೆಗೇ ಬಿಜೆಪಿಯ ಅಭಿವೃದ್ಧಿ ವಿರೋಧಿ ಆಳಿತ ಅಂತ್ಯ ಕಂಡಿದೆ. ಕಲಬುರಗಿ ನಗರದಲ್ಲಿ ಇನ್ಮುಂದೆ ಅಭಿವೃದ್ಧಿಗೆ ಹೊಸ ವೇಗ ದೊರಕಲಿದೆ ಎಂದು ಡಾ. ಅಜಯ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಮೂಲ ಸವಲತ್ತು ವಿಚಾರಗಳು, ಸಂಚಾರ ಸಮಸ್ಯೆ ನಿವಾರಣೆ ಸೇರಿದಂತೆ ಹಲವು ಸವಲತ್ತುಗಳನ್ನು ನಗರದಲ್ಲಿ ಕಲ್ಪಿಸಬೇಕಿದೆ. ಈ ವಿಚಾರದಲ್ಲಿ ಪಾಲಿಕೆಯ ಆಡಳಿತ ಕೈಗೊಳ್ಳುವ ತೀರ್ಮಾನಗಳಿಗೆ ಕೆಕೆಆರ್‌ಡಿಬಿ ಬೆಂಬಲಿಸಲಿದೆ ನಗರಾಭಿವೃದ್ಧಿಗೆ ಮಂಡಳಿಯೂ ಪಾಲಿಕೆಯೊಂದಿಗೆ ಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈ ಜೋಡಿಸಲಿದೆ ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.
ಪಾಲಿಕೆಯಲ್ಲಿನ ಈ ಐತಿಹಾಸಿಕ ಗೆಲುವಿಗಾಗಿ ಕೈ ಜೋಡಿಸಿರುವಂತಹ ಎಲ್ಲಾ ಮುಖಂಡರಿಗೆ, ಪಾಲಿಕೆ ಸದಸ್ಯರಿಗೆ, ಪಕ್ಷದ ಹಿರಿಯರಿಗೆ, ಜನಪ್ರತಿನಿಧಿಗಳಿಗೆಲ್ಲರಿಗೂ ಡಾ. ಅಜಯ್‌ ಧರ್ಮಸಿಂಗ್‌ ಅಭಿನಂದಿಸಿದ್ದಾರೆ.