ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಆಳವಡಿಕೆ ವಿರೋಧಿಸಿ ಚಾಲಕರಿಂದ ಪ್ರತಿಭಟನೆ
ಕಲಬುರಗಿ ಜು.30: ವಾಹನಗಳಿಗೆ ಪ್ಯಾನಿಕ್ ಬಟನ್, ಜಿಪಿಎಸ್ ಅಳಡಿಕೆ ಮಾಡಲು ಸರ್ಕಾರ ಆದೇಶ ನೀಡಿರುವುದು ಅವೈಜ್ಞಾನಿಕ ಕೂಡಲೇ ಸರ್ಕಾರ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಚಾಲಕರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ವಾಹನಗಳಿಗೆ ಜಿ.ಪಿ.ಎಸ್ ಮತ್ತು ಪ್ಯಾನಿಕ್ ಬಟನ್ ಆಳವಡಿಸಲು ಸರ್ಕಾರದ ಆದೇಶ ನೀಡಿದ್ದು ಅವೈಜ್ಞಾನಿಕವಾಗಿದೆ ಹಾಗೂ ಬಡ ಚಾಲಕರಿಗೆ ಆರ್ಥಿಕ ಹೊರೆಯಾಗುತ್ತಿದ್ದು ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಏಜೆಂಟರ ಹಾವಳಿ ಅತಿಯಾಗಿದ್ದು ಚಾಲನಾ ಪರವಾನಿಗೆ, ಚಾಲನಾ ನವೀಕರಣ ಹಾಗೂ ಇತರೆ ಕೆಲಸಗಳಿಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದರೆ ಅಧಿಕಾರಿಗಳು ಸ್ಪಂದನೆ ನೀಡದೆ ಏಜೆಂಟರ ಮೂಲಕ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಅತಿ ಹೆಚ್ಚಿನ ಮೊತ್ತ ಪಡೆದು ಕೆಲಸಗಳನ್ನು ಮಾಡುತ್ತಿದ್ದಾರೆ ಹಣ ಕೊಡದಿದ್ದಲ್ಲಿ ಸುಖಾಸುಮ್ಮನೆ ಚಾಲಕರನ್ನು ಸತಾಯಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆಯ ಈ ದಿನಗಳಲ್ಲಿ ಕಾರಿನ ಬಾಡಿಗೆ ಹೆಚ್ಚಿಗೆ ಕೇಳುವಂತಿಲ್ಲ. ಇಂತಹ ಸಂದರ್ಭದಲ್ಲಿ ಜಿಟಿಎಸ್, ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯ ಮಾಡುವುದರಿಂದ ದುಬಾರಿ ಬೆಲೆಯದ್ದನ್ನು ಅಳವಡಿಸುವುದು ಕಷ್ಟವಾಗುತ್ತದೆ. ಕಾರಿನ ಚಾಲಕರಿಗೆ ಜೀವನವನ್ನೇ ನಡೆಸುವುದು ದುಸ್ತರವಾಗಿದ್ದು, ಇಂತಹ ಸಂದರ್ಭದಲ್ಲಿ ಇಂತಹ ಕ್ರಮವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಶೀಲ್, ಭೀಮರಾಯ್, ಮಲ್ಲಿಕಾರ್ಜುನ್ ಬಿರಾದಾರ್, ರಾಹುಲ್ ಹಿರೇಮಠ್, ಜಗದೀಶ್ ಗುತ್ತೇದಾರ್, ಭೀಮಯ್ಯ ಗುತ್ತೇದಾರ್, ಮಂಜುನಾಥ್, ಅನಿಲ್ ಪಾಟೀಲ್, ಸುಭಾಷ್ ಪಾಟೀಲ್ ಸೇರಿದಂತೆ ಅನೇಕ ಚಾಲಕರು ಪಾಲ್ಗೊಂಡಿದ್ದರು.